ಗುಂಡ್ಲುಪೇಟೆ: ನಮ್ಮ ವಿಚಾರಗಳನ್ನು ಹೇಳಲು ಈಗ ಯಾವುದೇ ದಾರಿಗಳು ಉಳಿದಿಲ್ಲ. ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಮ್ಮ ಅಭಿವ್ಯಕ್ತಿಯ ಎಲ್ಲಾ ದಾರಿಗಳು ಮುಚ್ಚಿಹೋಗಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರನ್ನು ತಲುಪಲು ಪಕ್ಷಕ್ಕೆ ಉಳಿದಿರುವ ಏಕೈಕ ಆಯ್ಕೆ ‘ಭಾರತ್ ಜೋಡೋ ಯಾತ್ರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಅವರ 'ಭಾರತ್ ಜೋಡೋ ಯಾತ್ರೆ' ತಮಿಳುನಾಡಿನ ಗುಡಲೂರಿನಿಂದ ಕರ್ನಾಟಕದ ಚಾಮರಾಜನಗರ ಜಿಲ್ಲೆಗೆ ಇಂದು ಪ್ರವೇಶಿಸಿತು.
'ಪ್ರಜಾಪ್ರಭುತ್ವದಲ್ಲಿ ವಿವಿಧ ಸಂಸ್ಥೆಗಳಿವೆ. ಮಾಧ್ಯಮಗಳು ಮತ್ತು ಸಂಸತ್ತು ಕೂಡ ಇವೆ. ಆದರೆ, ನಮ್ಮ ವಿರೋಧ ವ್ಯಕ್ತಪಡಿಸುವಾಗ ಇವೆಲ್ಲವುಗಳನ್ನು ಮುಚ್ಚಲಾಗುತ್ತದೆ ಮತ್ತು ಮಾಧ್ಯಮಗಳು ನಮ್ಮ ಮಾತನ್ನು ಕೇಳುವುದಿಲ್ಲ. ಇವುಗಳಲ್ಲಿ ಸರ್ಕಾರದ ಸಂಪೂರ್ಣ ನಿಯಂತ್ರಣವಿದೆ. ನಾವು ಮಾತನಾಡಲು ಆರಂಭಿಸಿದರೆ ಸಂಸತ್ತಿನಲ್ಲಿ ನಮ್ಮ ಮೈಕ್‌ಗಳನ್ನು ಮ್ಯೂಟ್ ಮಾಡಲಾಗುತ್ತದೆ. ವಿಧಾನಸಭೆಗಳಲ್ಲೂ ಕಾರ್ಯನಿರ್ವಹಿಸಲು ಅವಕಾಶವಿಲ್ಲ ಮತ್ತು ಪ್ರತಿಪಕ್ಷಗಳಿಗೆ ಕಿರುಕುಳ ನೀಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನಮಗೆ ಉಳಿದಿರುವ ಏಕೈಕ ಆಯ್ಕೆ ಭಾರತ್ ಜೋಡೋ ಯಾತ್ರೆ ಆಗಿದೆ' ಎಂದು ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
'ದೇಶದ ಯಾವ ಶಕ್ತಿಯೂ ಈ ಯಾತ್ರೆಯನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ, ಇದು 'ಭಾರತದ ನಡಿಗೆ'. ಇದು ಭಾರತದ ನಡಿಗೆ ಮತ್ತು ಭಾರತದ ಧ್ವನಿಯನ್ನು ಕೇಳುವ ಮೆರವಣಿಗೆಯಾಗಿದ್ದು, ಇದನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.
'ಮುಂದಿನ 21 ದಿನಗಳಲ್ಲಿ ಯಾತ್ರೆಯು ವಿವಿಧ ಜಿಲ್ಲೆಗಳ ಮೂಲಕ 511 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. ಈ ವೇಳೆ 'ಕರ್ನಾಟಕದ ನೋವನ್ನು' ಕೇಳುತ್ತೇವೆ ಎಂದ ಅವರು, 'ಮುಂದಿನ 20 ರಿಂದ 25 ದಿನಗಳಲ್ಲಿ, ನೀವು ನನ್ನೊಂದಿಗೆ ಬರುತ್ತೀರಿ ಮತ್ತು ನೀವು ಕರ್ನಾಟಕದ ನೋವನ್ನು ಕೇಳುತ್ತೀರಿ. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಭ್ರಷ್ಟಾಚಾರ, ನಿರುದ್ಯೋಗ ಮತ್ತು ಬೆಲೆ ಏರಿಕೆ ಬಗ್ಗೆ ಕೇಳುತ್ತೀರಿ' ಎಂದು ಹೇಳಿದರು.
'ಈ ಯಾತ್ರೆಯ ಉದ್ದೇಶವು ಭಾರತೀಯ ಸಂವಿಧಾನವನ್ನು 'ಉಳಿಸುವುದು' ಮತ್ತು 'ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ದ್ವೇಷ ಮತ್ತು ಹಿಂಸೆಯ ಸಿದ್ಧಾಂತದ ವಿರುದ್ಧ ನಿಲ್ಲುವುದಾಗಿದೆ. ಸಂವಿಧಾನ ಉಳಿಸಲು ಈ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ. ಸಂವಿಧಾನವಿಲ್ಲದೆ ಈ ತ್ರಿವರ್ಣ ಬಣ್ಣಕ್ಕೆ ಅರ್ಥವಿಲ್ಲ' ಎಂದು ನೆರೆದಿದ್ದ ಜನರನ್ನು ಉದ್ದೇಶಿಸಿ ಹೇಳಿದರು.
'ಬೆಲೆ ಏರಿಕೆ, ನಿರುದ್ಯೋಗ, ರೈತರ ಮೇಲಿನ ದೌರ್ಜನ್ಯ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣದ ವಿರುದ್ಧದ ಹೋರಾಟವನ್ನೂ ಯಾತ್ರೆ ಒಳಗೊಂಡಿದೆ. ಈ ಯಾತ್ರೆಯ ಉದ್ದೇಶವು ಕೇವಲ ಭಾಷಣ ಮಾಡುವುದಲ್ಲ, ಆದರೆ ನಿಮ್ಮ ಮಾತನ್ನು ಕೇಳುವುದಾಗಿದೆ' ಎಂದು ಅವರು ಹೇಳಿದರು.
إرسال تعليق