ಕೊಪ್ಪಳ ; ಸುಮಾರು ಹಳೆಯ ಸರ್ಕಾರಿ ಶಾಲೆಗಳಿಗೆ ತಮ್ಮ ಸ್ವಂತ ಹಣದಲ್ಲೇ ಬಣ್ಣ ಹಚ್ಚಿಸಲು ಮುಂದಾದ ಶಿಕ್ಷಕರು !

 ಕೊಪ್ಪಳ ತಾಲೂಕಿನಲ್ಲಿ ದಶಕಗಳಷ್ಟು ಹಳೆಯದಾದ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸುಧಾರಿಸಲು 10 ಸದಸ್ಯರ ಸರ್ಕಾರಿ ಶಾಲಾ ಶಿಕ್ಷಕರ ಗುಂಪು ಮುಂದಾಗಿದೆ.

                         ಪ್ರಾತಿನಿಧಿಕ ಚಿತ್ರ

By : Rekha.M
Online Desk

ಕೊಪ್ಪಳ: ಕೊಪ್ಪಳ ತಾಲೂಕಿನಲ್ಲಿ ದಶಕಗಳಷ್ಟು ಹಳೆಯದಾದ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸುಧಾರಿಸಲು 10 ಸದಸ್ಯರ ಸರ್ಕಾರಿ ಶಾಲಾ ಶಿಕ್ಷಕರ ಗುಂಪು ಮುಂದಾಗಿದೆ.

ಕಳೆದ ವರ್ಷ ಶಿಕ್ಷಕರ ದಿನದಂದು ಈ ಸಮಾನ ಮನಸ್ಕ ಶಿಕ್ಷಕರ ನಡುವಿನ ಸಾಮಾನ್ಯ ಸಂಭಾಷಣೆಯಿಂದಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯಲು ಸ್ವಯಂಪ್ರೇರಣೆಯಿಂದ ತಂಡವೊಂದನ್ನು ರಚಿಸಿಕೊಂಡಿದೆ. ಇದು ಶಾಲಾ ಕಟ್ಟಡಗಳಿಗೆ ಬಣ್ಣ ಬಳಿಯುವ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದು, ಕೊಪ್ಪಳದ ಬಿಇಒ ಕಚೇರಿ ಸೇರಿದಂತೆ ಈವರೆಗೆ 14 ಕಡೆ ಬಣ್ಣ ಬಳಿಯಲಾಗಿದೆ.

ಪ್ರತಿ ಶಾಲೆಗೆ ಬಣ್ಣ ಬಳಿಯಲು ಸುಮಾರು 40 ಸಾವಿರ ರೂಪಾಯಿ ವೆಚ್ಚ ತಗಲುತ್ತಿದ್ದು, ಶಿಕ್ಷಕರು ಸ್ವಯಂ ಪ್ರೇರಿತರಾಗಿ ಹಣ ಪಾವತಿಸುತ್ತಿದ್ದಾರೆ ಎಂದು ಸಮೂಹದ ಸದಸ್ಯ ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಕುರಿ ಹೇಳಿದ್ದಾರೆ.

'ನಾವು ಸರ್ಕಾರಿ ಶಾಲೆಯ ಕಟ್ಟಡವನ್ನು ಆಯ್ಕೆ ಮಾಡುತ್ತೇವೆ ಮತ್ತು ಭಾನುವಾರದಂದು ಅದರ ಪೇಂಟಿಂಗ್ ಕೆಲಸವನ್ನು ಕೈಗೊಳ್ಳುತ್ತೇವೆ. ಬೆಳಿಗ್ಗೆ 6 ಗಂಟೆಗೆ ನಮ್ಮ ಕೆಲಸವನ್ನು ಪ್ರಾರಂಭಿಸುತ್ತೇವೆ ಮತ್ತು ಸಂಜೆಯ ವೇಳೆಗೆ ನಾವು ಎಲ್ಲಾ 10 ಸದಸ್ಯರು ಸೇರಿಕೊಂಡು ಕೆಲಸವನ್ನು ಪೂರ್ಣಗೊಳಿಸುತ್ತೇವೆ ಎಂದು ಮತ್ತೋರ್ವ ಶಿಕ್ಷಕ ಬೀರಪ್ಪ ಅಂಡಗಿ ಹೇಳಿದರು.

ತಂಡದಲ್ಲಿ ಇತರ ಶಿಕ್ಷಕರಾದ ಕಾಶಿನಾಥ ಸಿರಿಗೇರಿ, ಶರಣಪ್ಪ, ಚಂದ್ರು, ಸುರೇಶ ಕಂಬಳಿ, ಹುಲುಗಪ್ಪ ಭಜಂತ್ರಿ, ವೀರೇಶ, ಗುರುಸ್ವಾಮಿ, ಮಲ್ಲಪ್ಪ ಗುಡದಣ್ಣನವರ್ ಇದ್ದಾರೆ.

ಇದುವರೆಗೆ ಕೊಪ್ಪಳ ತಾಲೂಕಿನ ಲಾಕಳ್ಗಡ ಅಳವಂಡಿ, ಹಿತ್ನಾಳ್, ಹೊಸಳ್ಳಿ, ಕಾವಲಿ, ಚಿಲಖಮುಖಿ, ಮಂಗಳಾಪುರ, ಕೂಟಗಾನಹಳ್ಳಿ, ಚಾಮಲಾಪುರ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳು, ಕುವೆಂಪು ನಗರದ ಸರ್ಕಾರಿ ಶಾಲೆ ಜತೆಗೆ ಮೇಲೆ ತಿಳಿಸಿದ ಬಿಇಒ ಕಚೇರಿಗೆ ಬಣ್ಣ ಬಳಿದಿದ್ದಾರೆ.

ಕೊಪ್ಪಳ ಬಿಇಒ ಉಮೇಶ ಪೂಜಾರ್ ಮಾತನಾಡಿ, ತಂಡಕ್ಕೆ ತಮ್ಮ ಉದಾತ್ತ ಕಾರ್ಯವನ್ನು ಮುಂದುವರಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.



Post a Comment

أحدث أقدم