BBMP ಚುನಾವಣೆ: ಸರ್ಕಾರದ ಮೀಸಲಾತಿ ಅಧಿಸೂಚನೆ ರದ್ದು, ನ. 30ರೊಳಗೆ ಹೊಸ ಮೀಸಲಾತಿಗೆ 'ಹೈ' ಸೂಚನೆ

 ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆ ನಿಮಿತ್ತ ರಾಜ್ಯ ಸರ್ಕಾರ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದ್ದು, ನವೆಂಬರ್ 30ರೊಳಗೆ ಹೊಸ ಮೀಸಲಾತಿ ನಿಗದಿಪಡಿಸಿ, ಅಧಿಸೂಚನೆ ಪ್ರಕಟಿಸಬೇಕು ಎಂದು ಹೇಳಿದೆ.

                    ಬಿಬಿಎಂಪಿ ಮತ್ತು ಕರ್ನಾಟಕ ಹೈಕೋರ್ಟ್

By : Rekha.M
Online Desk

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆ ನಿಮಿತ್ತ ರಾಜ್ಯ ಸರ್ಕಾರ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದ್ದು, ನವೆಂಬರ್ 30ರೊಳಗೆ ಹೊಸ ಮೀಸಲಾತಿ ನಿಗದಿಪಡಿಸಿ, ಅಧಿಸೂಚನೆ ಪ್ರಕಟಿಸಬೇಕು ಎಂದು ಹೇಳಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವಾರ್ಡ್‌ವಾರು ಮೀಸಲಾತಿ ಹೊರಡಿಸಿ ರಾಜ್ಯ ಸರ್ಕಾರವು ಆಗಸ್ಟ್‌ 16ರಂದು ಪ್ರಕಟಿಸಿದ್ದ ಅಧಿಸೂಚನೆಯನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದ್ದು, ನವೆಂಬರ್‌ 30ರ ಒಳಗೆ ಹೊಸದಾಗಿ ಮೀಸಲಾತಿ ನಿಗದಿಪಡಿಸಿ, ಅಧಿಸೂಚನೆ ಪ್ರಕಟಿಸಬೇಕು. ಡಿಸೆಂಬರ್‌ 31ರ ಒಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

ಬೆಂಗಳೂರಿನ ಈಜಿಪುರದ ಕೆ ಮಹದೇವ ಮತ್ತಿತರರು ಮೀಸಲಾತಿಗೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಭಾಗಶಃ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದ್ದು, ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಡಾ. ಭಕ್ತವತ್ಸಲ ನೇತೃತ್ವದ ಒಬಿಸಿ ಆಯೋಗಕ್ಕೆ ನೈಜ ಅಂಕಿ-ಅಂಶ ಒದಗಿಸಬೇಕು. ನವೆಂಬರ್‌ 30ರ ಒಳಗೆ ಮೀಸಲಾತಿ ಅಧಿಸೂಚನೆ ಪ್ರಕಟಿಸಬೇಕು. ಆನಂತರ ಒಂದು ತಿಂಗಳ ಒಳಗೆ ಅಂದರೆ ಡಿಸೆಂಬರ್‌ 31ರ ಒಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ಮಹಿಳೆಯರಿಗೆ ಮತ್ತು ಒಬಿಸಿಗೆ ಅಡ್ಡಾದಿಡ್ಡಿಯಾಗಿ ಮೀಸಲು ನಿಗದಪಡಿಸಿರುವುದರಿಂದ ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗಣವಾಗಿ ಮೀಸಲು ನಿಗದಿ ಮಾಡಿರುವುದರಿಂದ ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಪೀಠವು ಹೇಳಿದೆ.

ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು ಮೀಸಲಾತಿ ಮರು ನಿಗದಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್‌ ಎಸ್‌ ಶಿವಕುಮಾರ್‌ ಅವರು ಸಿದ್ಧಪಡಿಸಿದ್ದ ಅಫಿಡವಿಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಅಲ್ಲದೇ, ಮೀಸಲಾತಿ ಮರು ನಿಗದಿ ಮಾಡಲು 16 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಒಪ್ಪದ ಪೀಠವು ಇಂದಿನಿಂದ ಎಂಟು ವಾರಗಳ ಕಾಲಾವಕಾಶ ನೀಡಲಾಗುವುದು. ಇಂದಿನಿಂದ ಒಂದು ತಿಂಗಳಲ್ಲಿ ನಿವೃತ್ತ ನ್ಯಾ. ಭಕ್ತವತ್ಸಲ ಆಯೋಗಕ್ಕೆ ರಾಜ್ಯ ಸರ್ಕಾರವು ಮೀಸಲಾತಿ ಕಲ್ಪಿಸಲು ಅಗತ್ಯವಾದ ನೈಜ ದತ್ತಾಂಶ ಒದಗಿಸಬೇಕು. ಆನಂತರ ಒಂದು ತಿಂಗಳ ಒಳಗೆ ಮೀಸಲಾತಿ ನಿಗದಿಪಡಿಸಿ, ಅಧಿಸೂಚನೆ ಪ್ರಕಟಿಸಬೇಕು ಎಂದು ಹೇಳಿತು. ಬಳಿಕ ಒಂದು ತಿಂಗಳಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಆದೇಶಿಸಿತು.

ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಪೀಠವು ನ್ಯಾಯಾಲಯದ ಆದೇಶ ಪಾಲನೆ ಕುರಿತು ತಿಳಿದುಕೊಳ್ಳಲು ನವೆಂಬರ್‌ ೩೦ಕ್ಕೆ ಪ್ರಕರಣವನ್ನು ಪಟ್ಟಿ ಮಾಡಲು ಆದೇಶಿಸಿದೆ.

2020ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಆದೇಶ ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ರಾಜ್ಯ ಸರ್ಕಾರವು ತಡೆಯಾಜ್ಞೆ ಪಡೆದಿತ್ತು. ಪ್ರಸಕ್ತ ವರ್ಷದ ಮೇನಲ್ಲಿ ಮಧ್ಯಪ್ರದೇಶ ವರ್ಸಸ್‌ ಸುರೇಶ್‌ ಮಹಾಜನ್‌ ಪ್ರಕರಣದಲ್ಲಿ ದೇಶದೆಲ್ಲೆಡೆ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಯಾವುದೇ ವಿಳಂಬ ಮಾಡದೆ ಪ್ರಸ್ತುತ ನಡೆದಿರುವ ಸೀಟು ಹಂಚಿಕೆಯ ಪ್ರಕಾರವೇ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆನಂತರ ಸಾಕಷ್ಟು ಕಾನೂನುನ ಪ್ರಕ್ರಿಯೆ ಪೂರ್ಣಗೊಂಡು, ಈಗ ಡಿಸೆಂಬರ್‌ 31 ಒಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್‌ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

ಬಿಬಿಎಂಪಿಗೆ ಚುನಾವಣೆ ನಡೆಸದೆ ಈಗಾಗಲೇ ಎರಡು ವರ್ಷ ಕಳೆದಿರುವುದರಿಂದ ಸರ್ಕಾರದ ನಿಲುವಿಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು, ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಮುಂದೆ ಚುನಾವಣೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗುವುದಿಲ್ಲ ಮತ್ತು ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಮೀಸಲಾತಿಯನ್ನು ಪುನಃ ಮಾಡಲು ಸರ್ಕಾರಕ್ಕೆ ಒಂದು ವಾರದ ಸಮಯವನ್ನು ನೀಡಬಹುದು ಎಂದು ವಾದಿಸಿತ್ತು. ಯಾವುದೇ ಇತರ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸುವಲ್ಲಿ ಯಾವುದೇ ನ್ಯೂನತೆಗಳನ್ನು ಪ್ರಸ್ತುತ ಚುನಾವಣೆಗೆ ಪರಿಗಣಿಸಲಾಗುವುದಿಲ್ಲ ಎಂದು ಹಿರಿಯ ವಕೀಲರು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಆಯೋಗವು ಸಮಯಕ್ಕೆ ಚುನಾವಣೆಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸಿದೆ ಎಂದು ವಾದಿಸಿದರು.


Post a Comment

أحدث أقدم