ಮಳೆಗೆ ಸಿಲಿಕಾನ್ ಸಿಟಿ ಜಲಾವೃತ; ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ, 600 ಕಟ್ಟಡಗಳಿಗೆ ನೋಟಿಸ್​

 ಸಿಲಿಕಾನ್ ಸಿಟಿ ಬೆಂಗಳೂರನಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ಬಹುತೇಕ ಭಾಗಗಳು ಜಲಾವೃತ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಈ ಸಂಬಂಧ 600 ಕಟ್ಟಡಗಳಿಗೆ ನೋಟಿಸ್​ ಜಾರಿ ಮಾಡಿದೆ.

                                    ಬಿಬಿಎಂಪಿ ತೆರವು ಕಾರ್ಯಾಚರಣೆ

By : Rekha.M
Online Desk

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ಬಹುತೇಕ ಭಾಗಗಳು ಜಲಾವೃತ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಈ ಸಂಬಂಧ 600 ಕಟ್ಟಡಗಳಿಗೆ ನೋಟಿಸ್​ ಜಾರಿ ಮಾಡಿದೆ.

ಈ ಕುರಿತು ಸ್ವತಃ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಮಾಹಿತಿ ನೀಡಿದ್ದು, ರಾಜಕಾಲುವೆ ಒತ್ತುವರಿದಾರರಿಗೆ ಕಂದಾಯ ಇಲಾಖೆಯಿಂದ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ರಾಜಕಾಲುವೆ ಒತ್ತುವರಿಯಾಗಿರುವ ಕಟ್ಟಡಗಳ ಬಗ್ಗೆ ಪಟ್ಟಿ ಮಾಡಿದ್ದು, 600 ಒತ್ತುವರಿ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗಿದೆ. ರಾಜಕಾಲುವೆ ಒತ್ತುವರಿ ಕಾರ್ಯ ಮುಂದುವರೆದಿದ್ದು, ಮಹಾದೇವಪುರ ಭಾಗದಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಿದೆ. ಮಳೆ ಕಡಿಮೆಯಾಗಿರುವ ಕಾರಣ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಕೆಲವು ಕಡೆ ಒತ್ತುವರಿ ತೆರವು ಮಾಡಲಾಗಿದೆ. ಇಂದಿನಿಂದ ಪ್ರತಿಷ್ಠಿತ ವಿಲ್ಲಾಗಳ ಬಳಿ ಒತ್ತುವರಿ ತೆರವು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಹದೇವಪುರದ ಬಸವನಗರದಲ್ಲಿನ ಗೋಪಾಲನ್ ಕಾಲೇಜ್ ಆಡಳಿತ ಮಂಡಳಿಯಿಂದ ರಾಜಕಾಲುವೆ ಒತ್ತುವರಿ ಸ್ಥಳದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮೈದಾನ ನಿರ್ಮಾಣ ಮಾಡಲಾಗುತ್ತಿದೆ. ಮಳೆ ಬಂದಾಗೊಮ್ಮೆ ಮೈದಾನ ಬಳಿಯ ಜಾಗದಲ್ಲಿ ಪ್ರವಾಹ ಉಂಟಾಗಿತ್ತು. ಸದ್ಯ ಒತ್ತುವರಿ ಜಾಗದಲ್ಲಿ ಅಧಿಕಾರಿಗಳು ಮಾರ್ಕಿಂಗ್ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ದೊಡ್ಡಾನೆಗುಂದಿ ರಸ್ತೆಯ ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್​ನಿಂದ ರಾಜಕಾಲುವೆ ಒತ್ತುವರಿ ಮಾಡಲಾಗುತ್ತಿದೆ. ಒತ್ತುವರಿ ತೆರವು ಮಾಡಲು ಬಂದ ಜೆಸಿಬಿಯನ್ನು ಟೆಕ್ ಪಾರ್ಕ್​ನ ಸಿಬ್ಬಂದಿ ತಡೆದು ನಿಲ್ಲಿಸಿದ್ದರು. ಆದರೆ ಪೊಲೀಸರ ಮಧ್ಯ ಪ್ರವೇಶದ ಬಳಿಕ ಅಧಿಕಾರಿಗಳು ಕಾರ್ಯಾಚರಣೆಯನ್ನು ಪುನಾರಂಭಿಸಿದ್ದಾರೆ.

ರೈನ್ ಬೋ ಡ್ರೈವ್ ನಿವಾಸಿಗಳಿಗೂ ಆಪರೇಷನ್ ಭೀತಿ
ಇನ್ನು ಮಳೆ ನೀರು ನಿಂತು ರೈನ್ ಬೋ ಡ್ರೈವ್ ಲೇಔಟ್ ದೇಶಾದ್ಯಂತ ಹೆಸರುವಾಸಿಯಾಗಿತ್ತು. ಸದ್ಯ ಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವಂತೆ ನಗರದ ರೈನ್​ಬೋ ಡ್ರೈವ್​ ಲೇಔಟ್ ವಿಲ್ಲಾಗಳಿಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. ಒತ್ತುವರಿ ಜಾಗವನ್ನು ತೆರವು ಮಾಡದಿದ್ರೆ ನಾವೇ ಕಾರ್ಯಾಚರೆ ನಡೆಸುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕೆಂದು, 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್​ ನೋಟಿಸ್​ ಜಾರಿಗೊಳಿಸಿದ್ದಾರೆ. 

ರೈನ್​ಬೋ ಡ್ರೈವ್ ಲೇಔಟ್​​ನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನ ನಿರ್ಮಿಸಿರುವುದು ಬಹಿರಂಗವಾಗಿದೆ. ಇದೀಗ ವಿಲ್ಲಾಗಳ‌ನ್ನು ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಮಳೆ ನಿಂತು ಹೋದ ಮೇಲೆ ರೈನ್ ಬೋ ಡ್ರೈವ್​ಗೆ ಆತಂಕ ಶುರುವಾಗಿದೆ.



Post a Comment

أحدث أقدم