ಬೆಂಗಳೂರಿನ ಸಂಚಾರ ದಟ್ಟಣೆಗೆ ಸ್ಕೈಬಸ್ ಪ್ರಸ್ತಾವನೆ ಮುಂದಿಟ್ಟ ಕೇಂದ್ರ ಸಚಿವ ನಿತಿನ್ ಗಡ್ಕರಿ: 3 ತಿಂಗಳಲ್ಲಿ ಯೋಜನಾ ವರದಿ

 ಐಟಿ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಅಧ್ಯಯನ ಮಾಡಲು ಮತ್ತು ಸ್ಕೈ ಬಸ್ ಅಥವಾ ಟ್ರಾಲಿ ಬಸ್ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸುವ ಕಾರ್ಯಸಾಧ್ಯತೆಯ ಬಗ್ಗೆ ಮೂರು ತಿಂಗಳಲ್ಲಿ ಪ್ರಾಥಮಿಕ ವರದಿಯನ್ನು ಸಲ್ಲಿಸಲು ಅಂತರರಾಷ್ಟ್ರೀಯ ಸಲಹೆಗಾರರ ಅಭಿಪ್ರಾಯ ಪಡೆಯಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

                              ಸಿಎಂ ಬಸವರಾಜ ಬೊಮ್ಮಾಯಿಯವರೊಂದಿಗೆ ಮಾತುಕತೆಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್                                                                                          ಗಡ್ಕರಿ

By : Rekha.M
Online Desk

ಬೆಂಗಳೂರು: ಐಟಿ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಅಧ್ಯಯನ ಮಾಡಲು ಮತ್ತು ಸ್ಕೈ ಬಸ್ ಅಥವಾ ಟ್ರಾಲಿ ಬಸ್ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸುವ ಕಾರ್ಯಸಾಧ್ಯತೆಯ ಬಗ್ಗೆ ಮೂರು ತಿಂಗಳಲ್ಲಿ ಪ್ರಾಥಮಿಕ ವರದಿಯನ್ನು ಸಲ್ಲಿಸಲು ಅಂತರರಾಷ್ಟ್ರೀಯ ಸಲಹೆಗಾರರ ಅಭಿಪ್ರಾಯ ಪಡೆಯಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.       

ಸಾಮೂಹಿಕ ಕ್ಷಿಪ್ರ ಸಾರಿಗೆಯನ್ನು ವಿಸ್ತರಿಸಲು ಭೂಸ್ವಾಧೀನವು ಕಠಿಣ ಕಾರ್ಯವಾಗಿರುವುದರಿಂದ, ಸಿಂಗಾಪುರದಂತಹ ಸ್ಥಳಗಳಲ್ಲಿ ಸ್ಕೈಬಸ್‌ಗಳು ಕಾರ್ಯನಿರ್ವಹಿಸುತ್ತಿರುವುದು ಸಂಚಾರ ದಟ್ಟಣೆಗೆ ಪರಿಹಾರವಾಗಿದೆ. ಕೇಂದ್ರ ಸರ್ಕಾರ ಹಣಕಾಸಿನ ಸಹಾಯವನ್ನು ನೀಡುತ್ತದೆ ಎಂದರು.

ಬೆಂಗಳೂರು ದೇಶದ ಪ್ರಮುಖ ನಗರವಾಗಿದ್ದು, ಐಟಿ ಕೇಂದ್ರವಾಗಿರುವುದರ ಜೊತೆಗೆ ಸಂಶೋಧನಾ ಸಂಸ್ಥೆಗಳನ್ನು ಹೊಂದಿದೆ. ನಗರದ ಸಂಚಾರ ದಟ್ಟಣೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಸ್ಕೈಬಸ್‌ಗಳಲ್ಲಿ ಒಂದು ಲಕ್ಷ ಜನರು ಪ್ರಯಾಣಿಸಿದರೆ, ಸಂಚಾರ ದಟ್ಟಣೆಯನ್ನು ಖಂಡಿತವಾಗಿ ನಿವಾರಿಸಬಹುದು ಎಂದು ನಗರದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ‘ಮಂಥನ್-ಐಡಿಯಾ ಟು ಆಕ್ಷನ್’ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ಟ್ರಿಯಾದ ಡೊಪ್ಪೆಲ್‌ಮೇರ್ ಮತ್ತು ಫ್ರಾನ್ಸ್‌ನ ಪೂಮಾದಂತಹ ಅಂತರರಾಷ್ಟ್ರೀಯ ಏಜೆನ್ಸಿಗಳನ್ನು ಅಧ್ಯಯನ ನಡೆಸಲು ಸಂಪರ್ಕಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಚರಂಡಿ ನಿರ್ಮಿಸುವಲ್ಲಿ ಲೋಪಗಳಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. 

ಮೈಸೂರು ರಸ್ತೆಯಲ್ಲಿರುವ ಚರಂಡಿಗಳ ಬಗ್ಗೆ ಅಧ್ಯಯನ: ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಮೇಲ್ಸೇತುವೆ ಸರಿಪಡಿಸಲು ವಿಳಂಬವಾಗಿದ್ದಕ್ಕೆ ಇದೇ ಸಂದರ್ಭದಲ್ಲಿ ಸಚಿವ ಗಡ್ಕರಿ ಕ್ಷಮೆಯಾಚಿಸಿದರು. ಈ ಹಿಂದೆ ಯೋಜನೆಯನ್ನು ಕಾರ್ಯಗತಗೊಳಿಸಿದ ನವಯುಗ್ ಗುತ್ತಿಗೆದಾರರು ಮೇಲ್ಸೇತುವೆಯ ನವೀಕರಣವನ್ನು ಕೈಗೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಹೊಸ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿ ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗುವುದು ಎಂದರು.

ಕೇಂದ್ರ ಸಚಿವರಾಗಿ ತಮ್ಮ ಏಳು ವರ್ಷಗಳ ಅಧಿಕಾರಾವಧಿಯಲ್ಲಿ 50 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ಒಂದೇ ಒಂದು ಭ್ರಷ್ಟಾಚಾರದ ದೂರು ಬಂದಿಲ್ಲ ಎಂದು ಗಡ್ಕರಿ ಇದೇ ಸಂದರ್ಭದಲ್ಲಿ ಹೇಳಿದರು. 

ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನೂತನ ಸಂಸ್ಥೆ ಗುರುತಿಸಿ ಮೇಲ್ಸೇತುವೆ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳುವುದಾಗಿ ಗಡ್ಕರಿ ಭರವಸೆ ನೀಡಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಸಂಪೂರ್ಣ ರಸ್ತೆಯಲ್ಲಿರುವ ಚರಂಡಿಗಳ ಲೆಕ್ಕಪರಿಶೋಧನೆಯಿಂದ ನ್ಯೂನತೆಗಳು ಗೊತ್ತಾಗುತ್ತದೆ. ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಮಾರ್ಗಗಳನ್ನು ತೋರಿಸುತ್ತದೆ ಎಂದರು.



Post a Comment

أحدث أقدم