*ಯೋಗಥಾನ್-2022 : ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಡಿಸಿ ಸೂಚನೆ*

 ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಯೋಗವನ್ನು ಯುವಜನರಲ್ಲಿ ಪ್ರಚುರಪಡಿಸುವುದು ಹಾಗೂ ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಸೆ.17 ರಂದು ಶಿವಮೊಗ್ಗದಲ್ಲಿ ನಡೆಯುವ ಯೋಗಥಾನ್-2022 ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸೂಚಿಸಿದರು.



     ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ‘ಯೋಗಥಾನ್-2022’ ಕಾರ್ಯಕ್ರಮದ ಸಿದ್ದತೆ ಕುರಿತು ಕರೆಯಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸರ್ಕಾರ ರಾಜ್ಯದ 25 ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಗಥಾನ್ ಆಯೋಜಿಸಿದ್ದು ಅದರಲ್ಲಿ ಶಿವಮೊಗ್ಗವೂ ಒಂದು ಕೇಂದ್ರವಾಗಿದೆ. ಸುಮಾರು 5 ಲಕ್ಷ ಜನರನ್ನು ಸೇರಿಸಿ ದಾಖಲೆಯ ಯೋಗಾಭ್ಯಾಸ ಮಾಡುವ ಈ ಯೋಜನೆಯ ಯಶಸ್ಸಿಗೆ ಎಲ್ಲ ಅಧಿಕಾರಿಗಳು ಸಮರ್ಪಕ ಯೋಜನೆ ರೂಪಿಸಿ, ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದರು.
     ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆಯುಷ್ ಟಿವಿ, ವಿವಿಧ ಸಂಘಟನೆಗಳು ಸೇರಿದಂತೆ ಸಂಬಂಧಿಸಿದ ಎಲ್ಲರೂ ಸೇರಿ ಸಮರ್ಪಕವಾದ  ಮೈಕ್ರೊ ಪ್ಲಾನ್ ಇಂದೇ ತಯಾರಿಸಬೇಕು. 500 ಜನರ ಒಂದು ಬಾಕ್ಸ್‍ನಂತೆ 40 ಬಾಕ್ಸ್‍ಗಳನ್ನು ತಯಾರು ಮಾಡಬೇಕು. 100 ಜನ ಅಭ್ಯರ್ಥಿಗಳಿಗೆ ಒಬ್ಬ ಶಿಕ್ಷಕರಂತೆ ಒಟ್ಟು 200 ಶಿಕ್ಷಕರನ್ನು ನಿಯೋಜಿಸಬೇಕು. ಯಾವ ಬಾಕ್ಸಿನಲ್ಲಿ ಯಾವ ಕಾಲೇಜಿನ, ಸಂಸ್ಥೆಯ ವಿದ್ಯಾರ್ಥಿಗಳು ಬರುತ್ತಾರೆ, ಆ ಕಾಲೇಜಿನ ಶಿಕ್ಷಕರ, ಮುಖ್ಯಸ್ಥರ ಪಟ್ಟಿ ನೀಡಬೇಕು. ಹಾಗೂ ಹಿಂದುಳಿದ ವರ್ಗಗಳು, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಇಲಾಖೆ ಸೇರಿದಂತೆ ವಿವಿಧ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಉಸ್ತುವಾರಿ ವಹಿಸುವ ಶಿಕ್ಷಕರ ಪಟ್ಟಿ ನೀಡಬೇಕು. ಬಾಕ್ಸ್‍ವಾರು, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಎನ್‍ಎಸ್‍ಎಸ್ ಸ್ವಯಂ ಸೇವಕರು, ಎನ್‍ಎಸ್‍ಎಸ್ ಸಂಯೋಜಕರ ವಿವರ ಹಾಗೂ ವಿದ್ಯಾರ್ಥಿಗಳು ತಮ್ಮ ತಮ್ಮ ಬಾಕ್ಸ್‍ಗಳಿಗೆ ತಲುಪುವ ರೂಟ್ ಮ್ಯಾಪ್, ವೇದಿಕೆ ಸಿದ್ದತೆ ಸೇರಿದಂತೆ ಎಲ್ಲ ವಿವರಗಳನ್ನೊಳಗೊಂಡ ಸ್ಪಷ್ಟವಾದ ಮೈಕ್ರೋ ಪ್ಲಾನ್‍ನ್ನು ತಯಾರಿಸಬೇಕು ಎಂದು ಸೂಚನೆ ನೀಡಿದರು.


   ಸೆ.15 ರ ಸಂಜೆಯೊಳಗೆ ವೇದಿಕೆ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗಳು ಅಂತಿಮಗೊಳ್ಳಬೇಕು. ಸೆ.16 ರಂದು ನಿಗದಿತ ಸ್ಥಳವಾದ ಸೋಗಾನೆ ಸಮೀಪವಿರುವ ವಿಮಾನ ನಿಲ್ದಾಣದಲ್ಲಿ ಪ್ರಾತ್ಯಕ್ಷಿಕೆ ನಡೆಸಬೇಕು. ವಿದ್ಯಾರ್ಥಿಗಳ ನೋಂದಣಿ ಸಮಿತಿ, ಸ್ವಾಗತ, ವೇದಿಕೆ, ಸಾರಿಗೆ, ಸ್ವಚ್ಚತೆ, ಆಹಾರ ಮತ್ತು ಕುಡಿಯುವ ನೀರು, ಭದ್ರತೆ, ವಿದ್ಯುತ್, ಪ್ರಚಾರ, ಆರೋಗ್ಯ ಮತ್ತು ಸಮನ್ವಯ ಸೇರಿದಂತೆ ಒಟ್ಟು 11 ಸಮಿತಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
     ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ಮಾತನಾಡಿ, ಯೋಗಾಭ್ಯಾಸ ಮಾಡುವ ಸ್ಥಳಗಳಿಗೆ ಪ್ರವೇಶದ್ವಾರಗಳನ್ನು ನಿರ್ಮಿಸಿ, ಗೇಟ್ ಸಂಖ್ಯೆಗಳನ್ನು ನೀಡಬೇಕು. ಆಯಾ ಶಾಲಾ ಶಿಕ್ಷಕರು, ಶಾಲಾ ಮುಖ್ಯಸ್ಥರು ವಿದ್ಯಾರ್ಥಿಗಳ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
     ಯೋಗಥಾನ್-2022 ರ ಜಿಲ್ಲಾ ಸಂಯೋಜಕ ಮಂಜಪ್ಪ ಮಾತನಾಡಿ, ಈಗಾಗಲೇ 200 ಶಿಕ್ಷಕರಿಗೆ ಯೋಗ ತರಬೇತಿ ನೀಡಲಾಗಿದೆ. 100 ಜನ ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರನ್ನು ನಿಯೋಜಿಸಲಾಗುವುದು. ಹಾಸ್ಟೆಲ್‍ಗಳಿಂದ, ಕಾಲೇಜುಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ನೀಡಬೇಕು. ಈಗಾಗಲೇ ರಾಜ್ಯದಲ್ಲಿ 12 ಲಕ್ಷ ಅಭ್ಯರ್ಥಿಗಳಿಂದ ನೋಂದಣಿಯಾಗಿದ್ದು, 5 ಲಕ್ಷ ಅಭ್ಯರ್ಥಿಗಳಿಗೆ ಯೋಗಾಭ್ಯಾಸಕ್ಕೆ ಅವಕಾಶ ಇದೆ. ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ, ಯಶಸ್ವಿಯಾಗಿ ಯೋಗಥಾನ್ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
     ಕುವೆಂಪು ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಸಂಯೋಜಕ ಪರಿಸರ ನಾಗರಾಜ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳನ್ನು ಕರೆತರಲು ಬಸ್‍ಗಳ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಹಾಗೂ ಕಾಲೇಜುಗಳಲ್ಲಿ ಅಂದು ನಡೆಯುವ ಕ್ರೀಡೆ, ಇಂಟರ್ನಲ್‍ಗಳನ್ನು ಮುಂದೂಡುವಂತೆ ಮನವಿ ಮಾಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಕಾಶ್, ಸೂಡಾ ಆಯುಕ್ತ ಕೊಟ್ರೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು

Post a Comment

أحدث أقدم