ಸೆ.20ರಿಂದ ಸಿಂಹಾಸನ ಜೋಡಣೆ

 

 ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಲ್ಲೊಂದಾದ ಖಾಸಗಿ ದರ್ಬಾರ್‍ಗೆ ರತ್ನಖಚಿತ ಸ್ವರ್ಣ ಸಿಂಹಾಸನವನ್ನು ಜೋಡಿಸುವ ಕಾರ್ಯ ಸೆ.20ಕ್ಕೆ ಆರಂಭವಾಗಲಿದೆ.

ನವರಾತ್ರಿ ವೇಳೆ ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್‍ನ ಸಿಂಹಾಸನಾರೋಹಣಕ್ಕೆ ಬಳಸುವ ರತ್ನಖಚಿತ ಸ್ವರ್ಣ ಸಿಂಹಾಸನವನ್ನು ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಸಮ್ಮುಖದಲ್ಲಿ ಅರಮನೆ ನೆಲಮಾಳಿಗೆಯಲ್ಲಿನ ಭದ್ರತಾ ಕೊಠಡಿಯಿಂದ ಹೊರತೆಗೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಯೊಳಗೆ ಪ್ರವೇಶ ನಿರ್ಬಂಧಿಸಲಾಗುವುದು. ಭದ್ರತಾ ಕೊಠಡಿಯಿಂದ ರತ್ನಖಚಿತ ಸಿಂಹಾಸನದ ಭಾಗಗಳನ್ನು ಹೊರತೆಗೆದು, ನವಗ್ರಹ ಹೋಮ ಇನ್ನಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಅಂಬಾವಿಲಾಸ ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಗಲಿದೆ. ಆ ಸಂದರ್ಭಕ್ಕೆ ಅರಮನೆ ಪಟ್ಟದ ಆನೆ, ಹಸು, ಕುದುರೆಗಳು ಸಾಕ್ಷಿಯಾಗಲಿವೆ.

ಗೆಜ್ಜಗಳ್ಳಿ ಗ್ರಾಮಸ್ಥರಿಂದ ಜೋಡಣೆ: ರಾಜವಂಶಸ್ಥರು ಆಸೀನರಾಗುವ ಭಾಗ(ಆಸನ), ಸಿಂಹಾಸನವೇರಲು ಬಳಸುವ ಮೆಟ್ಟಿಲು, ಮೆರಗು ನೀಡುವ ಛತ್ರಿ, ಹೀಗೆ ಪ್ರಮುಖವಾಗಿ 13 ಭಾಗಗಳನ್ನಾಗಿ ವಿಂಗಡಿಸಿಟ್ಟಿರುವ ಭಾಗಗಳನ್ನು ನಾಜೂಕಿನಿಂದ ಜೋಡಿಸಲಾಗು ತ್ತದೆ. ಇದನ್ನು `ಸ್ವರ್ಣಾಸನ ಜೋಡಣಾ ಕಾರ್ಯ’ ಎಂದು ಕರೆಯಲಾಗುತ್ತದೆ. ಈ ಸೂಕ್ಷ್ಮ ಕಾರ್ಯವನ್ನು ಮೈಸೂರು ತಾಲೂಕು ಗೆಜ್ಜಗಳ್ಳಿ ಗ್ರಾಮಸ್ಥರು ನಿರ್ವಹಿಸಲಿದ್ದಾರೆ. ನವರಾತ್ರಿ ಮೊದಲ ದಿನ ರಾಜವಂಶಸ್ಥರು ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಸಿಂಹದ ಆಕೃತಿಯನ್ನು ಜೋಡಿಸಿದ ನಂತರವಷ್ಟೇ ಪರಿಪೂರ್ಣ ಸಿಂಹಾಸನವಾಗಲಿದೆ. ಸಿಂಹಾಸನ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯಭಾಗದಲ್ಲಿ ವಿಷ್ಣು ದೇವರ ಚಿತ್ರಗಳಿವೆ. ನಾಲ್ಕು ಸಿಂಹಗಳಿರು ವುದು ಸಿಂಹಾಸನದ ಶೋಭೆ ಹೆಚ್ಚಿಸಿದೆ. ಸಿಂಹಾಸನ ಕಲಶದಂತಿರುವ ಛತ್ರಿಯ ಮೇಲೆ ಸಂಸ್ಕøತದ ಶ್ಲೋಕಗಳಿವೆ. ಕುದುರೆ, ಹಂಸ, ಸ್ವಸ್ತಿಕ್, ನಾಗದೇವತೆಯನ್ನು ಚಿತ್ರಿಸಲಾಗಿದೆ.

ಸೆ.26ರಿಂದ ಖಾಸಗಿ ದರ್ಬಾರ್: ನವರಾತ್ರಿ ಸಂದರ್ಭದಲ್ಲಿ ರಾಜ ವಂಶಸ್ಥರು ರತ್ನಖಚಿತ ಸ್ವರ್ಣ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸುವುದು ಶತಮಾನಗಳಿಂದ ನಡೆದುಬಂದಿರುವ ಸಂಪ್ರದಾಯವಾಗಿದೆ. ಅದರಂತೆ ಈ ಬಾರಿ ಸೆ.26ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರಕುವುದರ ಜೊತೆಗೆ ಖಾಸಗಿ ದರ್ಬಾರ್ ಕೂಡ ಆರಂಭವಾಗಲಿದೆ. ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆ ದರ್ಬಾರ್ ಹಾಲ್‍ನಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಆಕೃತಿಯನ್ನು ಜೋಡಿಸಿ, ಪೂಜೆ ಸಲ್ಲಿಸಿದ ಬಳಿಕ ಸಿಂಹಾಸನಾರೂಢರಾಗುವ ಮೂಲಕ ಖಾಸಗಿ ದರ್ಬಾರ್ ಚಾಲನೆ ಪಡೆಯಲಿದೆ. ಅಂದು ಬೆಳಗ್ಗೆಯಿಂದಲೇ ಅರಮನೆ ಪುರೋಹಿತರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಭಾಗಿಯಾಗಲಿದ್ದಾರೆ

ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ, ಸವಾರಿ ತೊಟ್ಟಿಯಿಂದ ಅವರನ್ನು ದರ್ಬಾರ್ ಹಾಲ್‍ಗೆ ಬಿರುದು ಬಾವಲಿ, ಬಹುಪರಾಕ್‍ನೊಂದಿಗೆ ಕರೆತರುವುದು, ಸಿಂಹಾಸನದ ಬಳಿ ಕಳಸ ಪೂಜೆ, ಪ್ರದಕ್ಷಿಣೆ ಹೀಗೆ ಹಲವು ವಿಧಿವಿಧಾನಗಳ ಬಳಿಕ ನಿಗದಿತ ಶುಭ ಘಳಿಗೆಯಲ್ಲಿ ರತ್ನಖಚಿತ ಸಿಂಹಾಸನದಲ್ಲಿ ಯದುವೀರ್ ಅವರು ವೀರಾಜಮಾನರಾಗಲಿ ದ್ದಾರೆ. ಆ ವೇಳೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ, ಪರಕಾಲ ಮಠ, ಶ್ರೀರಂಗಪಟ್ಟಣದ ಶ್ರೀರಂಗನಾಥೇಶ್ವರ ದೇವಾಲಯ, ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯ, ನಂಜನಗೂಡು ಶ್ರೀ ಶ್ರೀಕಂಠೇಶ್ವರ ದೇವಾಲಯ, ಉತ್ತನಹಳ್ಳಿಯ ತ್ರಿಪುರಸುಂದರಿ ಜ್ವಾಲಾಮುಖಿ ದೇವಾಲಯ ಹಾಗೂ ಅರಮನೆಯ ಆವರಣದಲ್ಲಿರುವ ಎಲ್ಲಾ ದೇವಾಲಯಗಳ ಪ್ರಸಾದವನ್ನು ಒಡೆಯರ್‍ಗೆ ನೀಡಿ, ತೀರ್ಥ ಪ್ರೋಕ್ಷಣೆ ಮಾಡುವ ಪದ್ಧತಿ ಇದೆ. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಸೆ.26ರಂದು ಮಧ್ಯಾಹ್ನ 2 ಗಂಟೆವರೆಗೂ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಯೊಳಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ.

Post a Comment

أحدث أقدم