ಸುಪ್ರೀಂ ಕೋರ್ಟ್ ನ 49ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ (Justice U U Lalit) ಇಂದು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ನೂತನ ಮುಖ್ಯ ನ್ಯಾಯಾಧೀಶರು
By : Rekha.M
ನವದೆಹಲಿ: ಸುಪ್ರೀಂ ಕೋರ್ಟ್ ನ 49ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ (Justice U U Lalit) ಇಂದು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.ನ್ಯಾಯಮೂರ್ತಿ ಎನ್ ವಿ ರಮಣ ಅವರು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿನ್ನೆಯಷ್ಟೇ ನಿವೃತ್ತರಾಗಿದ್ದರು.
ತಾವು ನಿರ್ಗಮಿಸುತ್ತಿರುವ ಹೊತ್ತಿನಲ್ಲಿ ಜಸ್ಟಿಸ್ ರಮಣ ಅವರು ಸಂಪ್ರದಾಯ ಮತ್ತು ಹಿರಿತನದ ಮಾನದಂಡಗಳಿಗೆ ಅನುಗುಣವಾಗಿ ನ್ಯಾಯಮೂರ್ತಿ ಲಲಿತ್ ಅವರನ್ನು ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು. ನಂತರ ರಾಷ್ಟ್ರಪತಿಗಳು ನೂತನ ಸಿಜೆಐ ಆಗಿ ನ್ಯಾಯಮೂರ್ತಿ ಲಲಿತ್ ಅವರ ನೇಮಕವನ್ನು ದೃಢಪಡಿಸಿದರು.
ನ್ಯಾಯಮೂರ್ತಿ ಲಲಿತ್ ಅವರು ಭಾರತದ ನ್ಯಾಯಾಂಗ ವ್ಯವಸ್ಥೆಯ ಪರಮೋಚ್ಛ ಕೇಂದ್ರ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಮುಂದಿನ 74 ದಿನಗಳ ಕಾಲ ಅಧಿಕಾರದಲ್ಲಿದ್ದು ನವೆಂಬರ್ 8 ರಂದು ನಿವೃತ್ತರಾಗಲಿದ್ದಾರೆ.
ನಿನ್ನೆ, ನ್ಯಾಯಮೂರ್ತಿ ರಮಣ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ, ಜಸ್ಟಿಸ್ ಲಲಿತ್ ಅವರು ಸುಮಾರು ಮೂರು ತಿಂಗಳ ತಮ್ಮ ಅಧಿಕಾರಾವಧಿಯಲ್ಲಿ ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವುದಾಗಿ ಹೇಳಿದ್ದರು. ಪ್ರಕರಣಗಳ ಪಟ್ಟಿಯನ್ನು ಸರಳ, ಸ್ಪಷ್ಟ ಮತ್ತು ಸಾಧ್ಯವಾದಷ್ಟು ಪಾರದರ್ಶಕವಾಗಿಸುವುದು ಅವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.
ನ್ಯಾಯಮೂರ್ತಿ ಲಲಿತ್ ಅವರು ಸುಪ್ರೀಂ ಕೋರ್ಟ್‌ನ ಆಯಾ ಪೀಠಗಳ ಮುಂದೆ ಯಾವುದೇ ತುರ್ತು ವಿಷಯಗಳನ್ನು ಮುಕ್ತವಾಗಿ ಉಲ್ಲೇಖಿಸಬಹುದಾದ ಸ್ಪಷ್ಟ ಆಡಳಿತವನ್ನು ನೀಡುವುದಾಗಿ ನಿನ್ನೆ ಭರವಸೆ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವರ್ಷವಿಡೀ ಕನಿಷ್ಠ ಒಂದು ಸಂವಿಧಾನ ಪೀಠವಾದರೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದಾಗಿ ಹೇಳಿದ್ದರು.
ನ್ಯಾಯಮೂರ್ತಿ ಲಲಿತ್ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗುವ ಮೊದಲು ಹೆಸರಾಂತ ಹಿರಿಯ ವಕೀಲರಾಗಿದ್ದರು. ಅವರು ಆಗಸ್ಟ್ 13, 2014 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಮೂರ್ತಿ ಲಲಿತ್ ಅವರು ವಕೀಲರ ಬಾರ್ ಕೌನ್ಸಿಲ್ ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಏರಿದ ಎರಡನೇ ಸಿಜೆಐ ಆಗಲಿದ್ದಾರೆ.
ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 9, 1957 ರಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಜನಿಸಿದರು. ಅವರ ತಂದೆ ಯು ಆರ್ ಲಲಿತ್ ಅವರು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿದ್ದರು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದರು. ನ್ಯಾಯಮೂರ್ತಿ ಲಲಿತ್ ಅವರು ಜೂನ್ 1983 ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಕ್ರಿಮಿನಲ್ ಕಾನೂನಿನಲ್ಲಿ ಪರಿಣತಿ ಪಡೆದಿದ್ದಾರೆ. 1983 ರಿಂದ 1985 ರವರೆಗೆ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಅಭ್ಯಾಸ ಮಾಡಿದರು.
ಜನವರಿ 1986 ರಲ್ಲಿ ತಮ್ಮ ವೃತ್ತಿಯನ್ನು ದೆಹಲಿಗೆ ವರ್ಗಾಯಿಸಿಕೊಂಡರು. 2004 ರಲ್ಲಿ ಅವರನ್ನು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾಗಿ ನೇಮಿಸಲಾಯಿತು. ನಂತರ ಅವರನ್ನು 2ಜಿ ತರಂಗಾಂತರ ಹಂಚಿಕೆ ಪ್ರಕರಣದ ವಿಚಾರಣೆ ನಡೆಸಲು ಸಿಬಿಐಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಯಿತು.
ನ್ಯಾಯಮೂರ್ತಿ ಲಲಿತ್ ಅವರು ಬರುವ ನವೆಂಬರ್ 8 ರಂದು ನಿವೃತ್ತಿಯಾದ ನಂತರ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ.
إرسال تعليق