ರಾಜ್ಯದಲ್ಲಿ ಅಗತ್ಯ ಬಿದ್ದರೆ ಯೋಗಿ ಮಾಡೆಲ್ ರೂಲ್ಸ್ ಜಾರಿ, ಕೋಮು ಸೌಹಾರ್ದ ಕದಡುವ ಶಕ್ತಿಗಳಿಗೆ ಕಡಿವಾಣ: ಸಿಎಂ ಬೊಮ್ಮಾಯಿ

 ರಾಜ್ಯದಲ್ಲಿ ಅಗತ್ಯ ಬಿದ್ದರೆ ಉತ್ತರ ಪ್ರದೇಶದ ಯೋಗಿ ಸರ್ಕಾರ ನಿಯಮವನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ

By : Nandan
Online Desk

ಬೆಂಗಳೂರು: ರಾಜ್ಯದಲ್ಲಿ ಅಗತ್ಯ ಬಿದ್ದರೆ ಉತ್ತರ ಪ್ರದೇಶದ ಯೋಗಿ ಸರ್ಕಾರ ನಿಯಮವನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದು ಜುಲೈ 28ಕ್ಕೆ 3 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ  ಸಂಪುಟ ಸಹೋದ್ಯೋಗಿಗಳ ಜೊತೆಗೆ ಸುದ್ದಿಗೋಷ್ಠಿಯನ್ನು ನಡೆಸಿದ ಸಿಎಂ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ನಿನ್ನೆ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್​​​​ ಹತ್ಯೆ ಪ್ರಕರಣ ಕುರಿತು ವಿಶೇಷವಾಗಿ ಮಾತನಾಡಿದರು. ಕೋಮುಸೌಹಾರ್ದ ಕದಡುವ ಶಕ್ತಿಗಳಿಗೆ ಕಡಿವಾಣ ಹಾಕುವುದರಲ್ಲಿ ಹಿಂದೇಟು ಹಾಕುವುದಿಲ್ಲ, ಕಳೆದ 10 ವರ್ಷಗಳಲ್ಲಿ ವಿಧ್ವಂಸಕ ಶಕ್ತಿಗಳು ಹೆಚ್ಚಾಗಿವೆ.  ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಮೂಲಕ ದೇಶದ್ರೋಹಿಗಳನ್ನು ತಿಹಾರ್ ಜೈಲಿಗೆ ಕಳುಹಿಸಿದ್ದೇವೆ, ಪ್ರವೀಣ್​​ ಕೊಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ.ರಾಜ್ಯದ ಜನರು ಸಂಯಮದಿಂದ ವರ್ತಿಸಬೇಕು, ಹರ್ಷನ ಪ್ರಕರಣದಲ್ಲಿ 24 ಗಂಟೆಯಲ್ಲೇ ಹಂತಕರನ್ನು ಬಂಧಿಸಿದೆವು, ಪ್ರವೀಣ್ ಪ್ರಕರಣದಲ್ಲಿ ಮಾತು ಕೊಡಲ್ಲ.. ಮಾಡಿ ತೋರಿಸುತ್ತೇವೆ ಎಂದರು.

ಅಗತ್ಯಬಿದ್ದರೆ ರಾಜ್ಯದಲ್ಲಿ  ಉತ್ತರ ಪ್ರದೇಶದ ಯೋಗಿ ಮಾದರಿ ನಿಯಮವನ್ನು ಜಾರಿಗೆ ತರುತ್ತೇವೆ. ಗಲಭೆ ಸೃಷ್ಟಿಸಲೆಂದೇ ಸಂಘಟನೆಗಳು ಹುಟ್ಟಿಕೊಂಡಿವೆ. ಪ್ರವೀಣ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹಂತಕರ ಪತ್ತೆಗೆ ಐದು ತಂಡ ರಚನೆ ಮಾಡಲಾಗಿದ್ದು, ಕೇರಳಕ್ಕೂ ಹೋಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜಿ ಇಲ್ಲ ಎಂದರು.

ಕಳೆದ ಬಾರಿ ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣದಲ್ಲಿ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದೆವು, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ,  ಈ ಬಾರಿ ಪ್ರವೀಣ್ ನೆಟ್ಟಾರು ಹತ್ಯೆ ಕೇಸಿನ ಬಗ್ಗೆ ನಾವು ಮಾತನಾಡುವುದಿಲ್ಲ, ಮಾಡಿ ತೋರಿಸುತ್ತೇವೆ, ಈ ಪ್ರಕರಣದಲ್ಲೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಕೋಮು ಸೌಹಾರ್ದತೆ ಕದಡುವ ಯಾವುದೇ ಸಂಘಟಿತ ಅಪರಾಧಕ್ಕೆ ಸರಕಾರ ಅವಕಾಶ ನೀಡುವುದಿಲ್ಲ, ಶಾಂತಿ ಕಾಪಾಡುವಂತೆ ಈ ಸಮಯದಲ್ಲಿ ಎಲ್ಲರನ್ನೂ ಕೋರುತ್ತೇನೆ ಎಂದರು.ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿಗಳಲ್ಲಿ ಯೋಗಿ ಮಾದರಿಯಲ್ಲಿ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಾ ಎಂದು ಪ್ರಶ್ನಿಸಿಗರು. ಉತ್ತರ ಪ್ರದೇಶ ಪರಿಸ್ಥಿತಿ ಬೇರೆ ಕರ್ನಾಟಕ ಪರಿಸ್ಥಿತಿ ಬೇರೆ. ನಾವು ಕೇವಲ ಮಾತನಾಡುವುದಿಲ್ಲ. ಕ್ರಮ ಜರುಗಿಸಿ ತೋರಿಸುತ್ತೇವೆ. ಯುಪಿಗೆ ಯೋಗಿ ಸೂಕ್ತ ಸಿಎಂ. ಕರ್ನಾಟಕದಲ್ಲಿ ಎಲ್ಲವನ್ನೂ ಪ್ರಯೋಗ ಮಾಡುತ್ತಿದ್ದು, ಪ್ರಸಂಗ ಬಂದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಜಾರಿ ಮಾಡುತ್ತೇವೆ ಎಂದು ಸಿಎಂ ಹೇಳಿದರು.

ಕೆಲವು ಶಕ್ತಿಗಳು ಅಹಿತಕರ ಘಟನೆ ಸೃಷ್ಟಿ ಮಾಡಲು ಕಾಯುತ್ತಿರುತ್ತವೆ. ಉದಾಹರಣೆಗೆ ಹಿಜಾಬ್ ಸಮಸ್ಯೆ ಸೃಷ್ಟಿಸಿದರು. ಹಿಜಾಬ್‌ ಸಮಸ್ಯೆಯನ್ನು ನಿಯಂತ್ರಣ ಮಾಡಿದ್ದೇವೆ. ಕೋರ್ಟ್ ಕೂಡಾ ಆದೇಶ ನೀಡಿದೆ. ಆಜಾನ್ ವಿಚಾರದಲ್ಲೂ ಸುಪ್ರೀಂಕೋರ್ಟ್ ಆದೇಶಗಳ ಪಾಲನೆ ಮೂಲಕ ನಿಯಂತ್ರಣ ಮಾಡಲಾಗಿದೆ. ಇಂತಹ ಸಮಸ್ಯೆಗಳನ್ನು ಎದುರಿಸಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ ಎಂದರು.ಪಿಎಫ್‌ಐನಂತಹ ಸಂಘಟನೆಗಳ ನಿಷೇಧ ಕುರಿತು ಕೇಳಿದಾಗ, ರಾಜ್ಯ ಸರ್ಕಾರಗಳು ಈ ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಯತ್ನ ಮಾಡಿವೆ. ಆದರೆ ಕೋರ್ಟಿನಲ್ಲಿ ಹಿನ್ನಡೆಯಾಗಿದೆ. ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು. ಆದಷ್ಟು ಬೇಗ ಕೇಂದ್ರದಿಂದ ಆ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ ಎಂದರು.

ಕಡತಗಳ ವಿಲೇವಾರಿ ವಿಳಂಬ ಆರೋಪ ಸುಳ್ಳು. ಅಭಿವೃದ್ಧಿ ಕುರಿತ ಎಲ್ಲ ಫೈಲ್ ಗಳೂ ವಿಲೇವಾರಿ ಆಗಿವೆ. ವರ್ಗಾವಣೆ ಕುರಿತ ಫೈಲ್‌ಗಳ ವಿಲೇವಾರಿ ಬಾಕಿಯಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕೆಲವು ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳು ಇಂತಹ ಘಟನೆಗಳಿಗೆ ಪ್ರಚೋದನೆ ನೀಡಿವೆಯೇ ಎಂಬ ಬಗ್ಗೆ, ಪಕ್ಷದ ಯಾವುದೇ ನಾಯಕರು ಅಂತಹ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಿದರು.

ತಮ್ಮ ಸರ್ಕಾರದ ಸಾಧನೆಯ ಅಂಕಗಳ ಬಗ್ಗೆ ಕೇಳಿದಾಗ, ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಶೂನ್ಯ ನೀಡಬಹುದು, ಆದರೆ ನಾವು ಅದಕ್ಕಿಂತ ಮೊದಲು ಹತ್ತು ಸೇರಿಸುತ್ತೇವೆ ಮತ್ತು ನಮ್ಮ ಅಂಕ 100 ಎಂದು ಹೇಳಿದರು.

https://twitter.com/i/broadcasts/1ypJdEkNXVLxW 


Post a Comment

أحدث أقدم