ಶಿವಮೊಗ್ಗ ಜಿಲ್ಲೆಯಾದ್ಯಂತ ವರದಿಯಾಗುವ ಅಪಘಾತ ಪ್ರಕರಣಗಳನ್ನು ಪರಿಶೀಲಿಸಿದಾಗ ಬಹುತೇಕ ಅಪಘಾತಗಳು ರಾತ್ರಿ ವೇಳೆಯಲ್ಲಿ ವಾಹನದ ಗೋಚರತೆ ಕಡಿಮೆ ಇರುವ ಕಾರಣದಿಂದ ಸಂಭವಿಸಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕ ಹಿತ ದೃಷ್ಠಿಯಿಂದ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ರಾತ್ರಿ ವೇಳೆಯಲ್ಲಿ ಗೂಡ್ಸ್ ವಾಹನಗಳು, ಟ್ರಾಕ್ಟರ್, ಎತ್ತಿನ ಗಾಡಿಗಳು ಮತ್ತು ಭಾರಿ ವಾಹನಗಳ ಗೋಚರತೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸುವ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು,
ಈ ವರೆಗೆ ಶಿವಮೊಗ್ಗ – ಬಿ ಉಪ ವಿಭಾಗದಲ್ಲಿ - 139, ಭದ್ರಾವತಿ ಉಪ ವಿಭಾಗದಲ್ಲಿ - 243, ಸಾಗರ ಉಪ ವಿಭಾಗದಲ್ಲಿ –149, ಶಿಕಾರಿಪುರ ಉಪ ವಿಭಾಗದಲ್ಲಿ –166 ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ –22, ಸೇರಿ ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 719 ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿರುತ್ತದೆ.
ಈ ದಿನ ದಿನಾಂಕಃ 27-02-2025 ರಂದು ಸಂಜೆ *ಶ್ರೀ ಮಿಥುನ್ ಕುಮಾರ್ ಜಿ ಕೆ, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ರವರು ಶಿಕಾರಿಪುರ ಉಪ ವಿಭಾಗದ ಶಿಕಾರಿಪುರ ಟೌನ್ ನ ಎಪಿಎಂಸಿ ಹತ್ತಿರ ಹಾಗೂ ಸಾಗರ ಉಪ ವಿಭಾಗದ ಆನಂದಪುರದಲ್ಲಿ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಡಿಸಿದರು ಮತ್ತು ಈ ಸಂದರ್ಭದಲ್ಲಿ ವಾಹನಗಳಿಗೆ ಅಳವಡಿಸಲಾಗಿದ್ದ ಕರ್ಕಷ ದ್ವನಿಯನ್ನುಂಟು ಮಾಡುವಂತಹ ಸೌಂಡ್ ಸಿಸ್ಟಂ ಗಳನ್ನು ವಾಹನಗಳಿಂದ ತೆಗೆಸಿ, ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು.
ಸಾರ್ವಜನಿಕರು ತಮ್ಮ ಬಳಿ ಇರುವ ದ್ವಿ ಚಕ್ರ ವಾಹನ, ಕಾರು, ಗೂಡ್ಸ್ ವಾಹನ, ಟ್ರಾಕ್ಟರ್, ಭಾರಿ ವಾಹನ ಹಾಗೂ ಎತ್ತಿನ ಗಾಡಿಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸುವುದರಿಂದ ವಾಹನಗಳ ಗೋಚರತೆ ಹೆಚ್ಚಾಗಿ, ಅಪಘಾತಗಳು ಸಂಭವಿಸುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದ ಸುರಕ್ಷತೆಯ ದೃಷ್ಠಿಯಿಂದ ಎಲ್ಲರೂ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಿ, ಇದರಿಂದ ನೀವು ಅಪಘಾತದಿಂದ ಆಗುವ ಪ್ರಾಣಾಪಾಯವನ್ನು ತಡೆದು ಜೀವವನ್ನು ರಕ್ಷಿಸಬಹುದಾಗಿರುತ್ತದೆ. ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆಯಿಂದ ಒಂದು ಜೀವವನ್ನು ಉಳಿಸಲು ಸಾಧ್ಯವಾದರೂ ಸಹಾ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಶ್ರಮಕ್ಕೆ ಗೌರವ ಮತ್ತು ಪ್ರತಿಫಲ ದೊರೆಕಿದಂತಾಗುತ್ತದೆ.
ಶಿಕಾರಿಪುರದಲ್ಲಿ ಕೇಶವ್, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ, ಆರ್ ಆರ್ ಪಾಟೀಲ್, ಪಿಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ, ಶರತ್ ಪಿಎಸ್ಐ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಮತ್ತು ಆನಂದಪುರದಲ್ಲಿ ಗೋಪಾಲ್ ಕೃಷ್ಣ ಟಿ ನಾಯ್ಕ್, ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ, ಸಂತೋಷ್ ಶೆಟ್ಟಿ, ಸಿಪಿಐ ಸಾಗರ ಗ್ರಾಮಾಂತರ ವೃತ್ತ ಮತ್ತು ಯುವರಾಜ್, ಪಿಎಸ್ಐ ಆನಂದಪುರ ಪೊಲೀಸ್ ಠಾಣೆ ರವರು ಉಪಸ್ಥಿತರಿದ್ದರು.
Post a Comment