ಜಿಲ್ಲೆಯ ಎಲ್ಲೆಡೆ ಬುಧವಾರ ಶಿವಭಕ್ತರು ಸಂಭ್ರಮದಿಂದ ಮಹಾಶಿವರಾತ್ರಿ ಆಚರಿಸಿದರು. ವಿಶೇಷವಾಗಿ ಶಿವ ದೇವಾಲಯಗಳನ್ನು ಬಣ್ಣದ ದೀಪಗಳಿಂದ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಹಬ್ಬದ ಅಂಗವಾಗಿ ಶಿವಮೊಗ್ಗದ ಶಿವನ ದೇವಾಲಯಗಳಲ್ಲಿ ಭಕ್ತಸಾಗರವೇ ನೆರೆದಿತ್ತು. ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನಡೆದವು. ಶಿವನ ದರ್ಶನ ಪಡೆದ ಭಕ್ತರು ಭಕ್ತಿಯ ಭಾವದಲ್ಲಿ ಮಿಂದೆದ್ದರು.
ಹರಕೆರೆಯ ಶಿವನ ದೇವಸ್ಥಾನದಲ್ಲಿ ಮುಂಜಾನೆ ಶಿವನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಗಳ ವೈಭವ ನಡೆಯಿತು. ವಿಶೇಷ ಪೂಜೆ, ಪುನಸ್ಕಾರ ಮತ್ತು ಬಿಲ್ವ ಪತ್ರೆ, ತುಂಬೆ ಅರ್ಪಣೆ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಭಕ್ತರಿಗೆ ವಿಶೇಷ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇಲ್ಲಿ ತುಂಗಾ ನದಿಯಲ್ಲಿ ಸ್ನಾನ ಮಾಡಿ ನಂತರ ಶಿವನ ದರ್ಶನ ಮಾಡಲಾಗುತ್ತದೆ. ಹಬ್ಬದ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಸೇರುತ್ತಾರೆ. ರಸ್ತೆಯಲ್ಲಿ ಹಗ್ಗಕಟ್ಟಿ ಸಾಲಿನಲ್ಲಿ ಶಿವನ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಷ್ಟು ಜನ ಇಲ್ಲಿ ಸೇರುತ್ತಾರೆ. ಹಾಗಾಗಿ, ಅರಕೆರೆ ಶಿವನ ದೇವಾಲಯದ ಶಿವರಾತ್ರಿ ಐತಿಹಾಸಿಕ ಮಹತ್ವ ಪಡೆದಿದೆ.
ಭಕ್ತರು ಬಿಸಿಲನ್ನು ಲೆಕ್ಕಿಸದೆ ಉದ್ದದ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಗರದ ಎಲ್ಲ ದೇವಾಲಯಗಳಲ್ಲಿ ಭಕ್ತರ ಜಂಗುಳಿ ಕಂಡುಬಂದಿತು. ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಶಿವನ ದೇಗುಲಗಳಲ್ಲದೆ ಎಲ್ಲ ದೇವಾಲಯಗಳಲ್ಲಿ ಬೆಳಿಗಿನಿಂದಲೇ ವಿಶೇಷ ಪೂಜೆ ಅಭಿಷೇಕ ನಡೆಯಿತು.
ವಿನೋಬ ನಗರದ ಶಿವನ ದೇವಾಲಯದಲ್ಲಿ ವಿಶೇಷವಾಗಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ದೇವಸ್ಥಾನಕ್ಕೆ ಗುಂಪು ಗುಂಪಾಗಿ ಪೂಜೆಗೆ ಬರುತ್ತಿರುವ ದೃಶ್ಯ ಕಂಡುಬಂತು. ಮಹಿಳೆಯರು ಅತ್ಯಂತ ಸಡಗರದಿಂದ ಮತ್ತು ಶ್ರದ್ಧಾಭಕ್ತಿಯಿಂದ ಶಿವನ ಆರಾಧಿಸುವ ದೃಶ್ಯ ಸಾಮಾನ್ಯವಾಗಿತ್ತು.
ಅಬ್ಬಲಗೆರೆ ಸಮೀಪದ ಈಶ್ವರವನದಲ್ಲಿ ವನದ ಮುಖ್ಯಸ್ಥ ಎಂ.ವಿ.ನಾಗೇಶ್ ನೇತೃತ್ವದಲ್ಲಿ ವಿಶೇಷ ಶಿವರಾತ್ರಿ ಆಚರಿಸಲಾಯಿತು. ಪ್ರಕೃತಿಯ ಪ್ರೇಮ ಸ್ವರೂಪಿಯೇ ಆದ ಈಶ್ವರನ ಆರಾಧನೆಯನ್ನು ಪ್ರಕೃತಿ ಉಳಿಸುವ ಮತ್ತು ಬೆಳೆಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇಲ್ಲಿ ಸುಮಾರು 120 ಪ್ರಭೇದದ 800 ವೃಕ್ಷಗಳನ್ನು ಬೆಳೆಸಲಾಗಿದೆ. ರುದ್ರಾಭಿಷೇಕ, ಭಜನೆ, ಪ್ರವಚನ, ಶಿವಸ್ತುತಿ ಮುಂತಾದ ಕಾರ್ಯಕ್ರಮಗಳು ಬೆಳಿಗ್ಗೆ 7ರಿಂದಲೇ ನಡೆದವು. ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೋಟೆ ಭೀಮೇಶ್ವರ ದೇವಾಲಯದಲ್ಲಿ ವಿಶೇಷವಾಗಿ ಶಿವನ ಪೂಜೆ ನಡೆಯಿತು. ಬೆಳಿಗ್ಗೆಯಿಂದಲೇ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಈಶ್ವರನ ದರ್ಶನ ಪಡೆದು ಪುನೀತರಾದರು. ನದಿಯ ದಂಡೆಯ ಮೇಲೆ ಈಶ್ವರ ದೇವಾಲಯ ಇರುವುದು ಇಲ್ಲಿನ ವಿಶೇಷವಾಗಿದೆ. ಭಕ್ತರಿಗೆಪಾನಕ ಮತ್ತು ಕೋಸಂಬರಿ ಹಂಚಲಾಯಿತು.
ವೀರಶೈವ ಕಲ್ಯಾಣ ಮಂದಿರದ ಶಿವನ ದೇವಾಲಯ, ಜೈಲ್ ಆವರಣದಲ್ಲಿರುವ ಉಮಾ ಮಹೇಶ್ವರ, ಬಸವನಗುಡಿಯ ಈಶ್ವರ ದೇವಾಲಯ, ರವೀಂದ್ರ ನಗರದ ಶಿವನ ಮೂರ್ತಿ, ತುಂಗಾ ತೀರದ ಅರಕೇಶ್ವರ ದೇವಾಲಯ, ಗಾಂಧಿ ಬಜಾರಿನ ಬಸವೇಶ್ವರ ದೇವಾಲಯ, ಮಲವಗೊಪ್ಪದ ಚನ್ನಬಸವೇಶ್ವರ, ಶರಾವತಿ ನಗರದ ಕಾಲಭೈರವೇಶ್ವರ ದೇವಾಲಯ, ಬಿ.ಎಚ್.ರಸ್ತೆಯ ಮೈಲಾರೇಶ್ವರ, ಬಿ.ಬಿ.ರಸ್ತೆಯ ಭವಾನಿ ಶಂಕರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳು, ಭಜನೆ ಆಯೋಜಿಸಲಾಗಿತ್ತು. ಬಸವನಗುಡಿ ಶೈಲಮಲ್ಲಿಕಾರ್ಜುನ ಸ್ವಾಮಿ ಮತ್ತು ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮೊದಲಾದ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಜಾಗರಣೆ ಅಂಗವಾಗಿ ದೇವಾಲಯಗಳಲ್ಲಿಭಕ್ತಿಗೀತೆ ಸೇರಿ ವಿವಿಧ ಕಾರ್ಯಕ್ರಮ ನಡೆದವು.
ಹಬ್ಬದ ಅಂಗವಾಗಿ ಕಲ್ಲಂಗಡಿ ಹಣ್ಣು, ಬನಸ್ಪತ್ರೆ, ಕರಬೂಜ ಮೊದಲಾದ ಹಣ್ಣುಗಳ ಖರೀದಿ ಜೋರಾಗಿತ್ತು. ಇವುಗಳೊಂದಿಗೆ ಹೂವು, ಪೂಜಾ ಸಾಮಗ್ರಿ ಹಾಗೂ ವಿವಿಧ ಹಣ್ಣುಗಳ ಮಾರಾಟವೂ ಜೋರಾಗಿತ್ತು.
Post a Comment