ತರಬೇತಿ ವೇಳೆ ಪ್ಯಾರಾಚೂಟ್ ತೆರೆಯದೆ ಆಗಸದಿಂದ ಕೆಳಗೆ ಬಿದ್ದು ಹುತಾತ್ಮರಾದ ವಾಯುಪಡೆ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅವರ ಪಾರ್ಥೀವ ಶರೀರ ಶಿವಮೊಗ್ಗ ತಲುಪಿದೆ. ಹೊಳೆ ಬಸ್ ನಿಲ್ದಾಣದ ಬಳಿ ಬೆಕ್ಕಿನ ಕಲ್ಮಠದ ಬಳಿ ಜನಪ್ರತಿನಿಧಿಗಳು, ಶಿವಮೊಗ್ಗ ನಾಗರಿಕರು ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅವರ ಪತ್ನಿ ಕಲ್ಪಿತಾ ಸಾಕಿಯ ಇದ್ದರು. ಪತಿಯ ಪಾರ್ಥೀವ ಶರೀರದ ಮುಂದೆ ಅವರ ಸಮವಸ್ತ್ರ ಹಿಡಿದು ಕಣ್ಣೀರಾದರು. ಇವರ ದುಖ ಇತರರಲ್ಲೂ ಕಣ್ಣೀರಾಗುವಂತೆ ಮಾಡಿತು.
ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅವರ ಪಾರ್ಥೀವ ಶರೀರವನ್ನು ಸೇನಾ ವಾಹನದಲ್ಲಿ ತರಲಾಗಿದೆ. ವಾಯುಪಡೆಯ ಅಧಿಕಾರಿಗಳು, ಜಿ.ಎಸ್.ಮಂಜುನಾಥ್ ಅವರ ಕುಟುಂಬ ಸದಸ್ಯರು ಜೊತೆಗಿದ್ದರು.
ಪಾರ್ಥೀವ ಶರೀರವನ್ನು ಹೊತ್ತ ವಾಹನ ಮಂಜುನಾಥ್ ಅವರ ಹುಟ್ಟೂರಾದ ಹೊಸನಗರದತ್ತ ತೆರಳಿದೆ. ಬಿಜೆಪಿ ಕಾರ್ಯಕರ್ತರು, ಶಿವಮೊಗ್ಗದ ನಾಗರಿಕರು, ಮಾಜಿ ಸೈನಿಕರು, ಸಂಸದ ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಸೇನಾ ವಾಹನದ ಜೊತೆಗೆ ಬೈಕ್ ಜಾಥಾದಲ್ಲಿ ನಡೆಸಿದರು.
Post a Comment