ಜಮೀನಿಗೆ ತೆರಳಲು ಅವಕಾಶ ನೀಡುವಂತೆ ಒತ್ತಾಯಿಸಿ ಧರಣಿ

 

ನ್ಯಾಯಾಲಯವು ತಾತ್ಕಾಲಿಕ ಆದೇಶ ನೀಡಿದ್ದರೂ ಸಹ ಜಮೀನಿಗೆ ಹೋಗಲು ಅವಕಾಶ ನೀಡತ್ತಿಲ್ಲ ಎಂದು ಆರೋಪಿಸಿ ರೈತ ಕುಟುಂಬವೊಂದು ಸೊರಬ ತಹಶೀಲ್ದಾರ್ ಕಚೇರಿ ಎದುರು ಅನ್ನ ಕೊಡಿ ಇಲ್ಲ ವಿಷ ಕೊಡಿ ಎಂದು ಬ್ಯನರ್ ಹಿಡಿದು ಪ್ರತಿಭಟನೆಗೆ ಇಳಿದಿದೆ.


ನ್ಯಾಯಾಲಯದ ಆದೇಶ ಉಲ್ಲಂಘಿಸಿ ಟ್ರೆಂಚ್ ಹೊಡೆದು ಜಮೀನಿಗೆ ಹೋಗದಂತೆ ಅಡ್ಡಿಪಡಿಸಿದ್ದಾರೆ ಎಂದು ಆಕ್ಷೇಪಿಸಿ ಕಸಬಾ ಹೋಬಳಿ ಬೊಪ್ಪಗೊಂಡನಕೊಪ್ಪ ಗ್ರಾಮದ ಡಿ.ಆರ್. ಬಸವರಾಜ್ ಬಿನ್ ರಾಜಶೇಖರಪ್ಪ ಕುಟುಂಬದ ಗುರುವಾರ ತಹಶೀಲ್ದಾರ್ ಕಚೇರಿ ಎದುರು ನಿನ್ನೆ ಧರಣಿ ಸತ್ಯಾಗ್ರಹ ನಡೆಸಿದರು.


ತಲತಲಾಂತರದಿಂದಲೂ ನಮ್ಮ ಹೊಲಕ್ಕೆ ತೆರಳುವ ಸನಂ ೧/೩೦, ೩೨ ರ ವಾರಾಸುದಾರರು ಹಾದಿಯನ್ನು ಏಕಾಏಕಿ ಮುಚ್ಚಿ ಹೊಲಕ್ಕೆ ತೆರಳದಂತೆ ಮಾಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಗೆ ಮೇಲಿಂದ ಮೇಲೆ ದೂರು ಸಲ್ಲಿಸಿ ಬಗೆಹರಿಯದಿದ್ದಾಗ ನ್ಯಾಯಾಲಯದ ಮೊರೆ ಹೋಗಿದ್ದು ಮೂಲದಲ್ಲಿದ್ದಂತೆ ತೆರಳುವ ಮಾರ್ಗ ನ್ಯಾಯಾಲಯದ ತೀರ್ಪು ಬರುವ ತನಕವೂ ಮುಚ್ಚಕೂಡದು ಎಂದು ತಡೆಯಾಜ್ಞೆ ತರಲಾಗಿದೆ. ಆದಾಗ್ಯೂ ಮತ್ತೆ ಅಗಳ ತೆಗೆದು ರಸ್ತೆ ಮುಚ್ಚಿದ್ದಾರೆ. ಈಗ ನ್ಯಾಯಾಲಯದ ಆದೇಶದಂತೆ ತಹಶೀಲ್ದಾರರು ನಮಗೆ ರಸ್ತೆ ತೆರವುಗೊಳಿಸಿ ಕೊಡಲಿ. ಅಲ್ಲಿಯವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಧರಣಿ ಮುಂದುವರೆಸಿದ್ದಾರೆ.


ನಂತರ ಧರಣಿ ನಿರತ ಕುಟುಂಬದವರೊಂದಿಗೆ ಮಾತನಾಡಿದ ತಹಶೀಲ್ದಾರ್ ಮಂಜುಳಾ ಹೆಗಡಾಳ್, ತಾವು ಖುದ್ದಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದಾಗಿ ಭರವಸೆ ನೀಡಿ, ಪ್ರತಿಭಟನೆಯನ್ನು ಹಿಂಪಡೆಯುವಂತೆ ತಿಳಿಸಿದರು. 


ಆದರೆ ಪ್ರತಿಭಟನೆ ನಿರತ ಬಸವರಾಜ್ ಕುಟುಂಬ ನ್ಯಾಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ, ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.


ಈಗಾಗಲೇ ಹೊಲದಲ್ಲಿ ಬೆಳೆದಿರುವ ಬೆಳೆ ಕಟಾವಿಗೆ ಬಂದಿದ್ದು, ಸಾಗಿಸಲು ದಾರಿ ಇಲ್ಲದೇ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಅಲ್ಲದೇ ವರ್ಷ ಆಹಾರ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರಸ್ತೆ ತೆರವುಗೊಳಿಸಿಕೊಡುವಂತೆ ತಹಶೀಲ್ದಾರರಿಗೆ ಸೂಚಿಸಿದ್ದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಆದ್ದರಿಂದ ಈ ಕೂಡಲೇ ಟ್ರಂಚ್ ಹೊಡೆಯುವುದನ್ನು ನಿಲ್ಲಿಸಲಿ, ನಮ್ಮ ಜಮೀನಿಗೆ ತೆರಳಲು ಅನುವು ಮಾಡಿಕೊಡಲಿ. ತಮ್ಮಿಂದ ಆಗುವುದಿಲ್ಲ ಎಂದಾದರೆ ಹಿಂಬರಹ ಕೊಡಲಿ ಎಂದು ಪ್ರತಿಭಟನಾಕಾರ ಬಸವರಾಜ್ ತಹಶೀಲ್ದಾರರಿಗೆ ಮನವಿ ಮಾಡಿದರು.


ಪ್ರತಿಭಟನೆಯಲ್ಲಿ ಕುಟುಂಬ ಸದಸ್ಯರಾದ ಬಿ. ರಾಜಶೇಖರಪ್ಪ, ನೀಲಮ್ಮ, ಡಿ. ವಿದ್ಯಾಲಕ್ಷ್ಮಿ, ಡಿ.ಆರ್. ನಂದೀಶ, ಡಿ.ಎನ್. ನಳಿನಿ, ಪ್ರಜ್ವಲ್, ಶ್ರೇಯಸ್ ಇದ್ದರು

Post a Comment

Previous Post Next Post