ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ವತಿಯಿಂದ ಗ್ರಾಮ ಆಡಳಿತ ಅಧಿಕಾರಿಗಳ ಎರಡನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಯಿತು.
ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಯಶವಂತರಾಜ್ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಮತ್ತು ಅಲ್ಮೆರಾ, ಅತ್ಯುತ್ತಮ ಮಟ್ಟದ ಮೊಬೈಲ್, ಪ್ರಿಂಟರ್, ಸ್ಕ್ಯಾನರ್ ಒದಗಿಸಬೇಕು. ಈ ಹಿಂದೆ ಧರಣಿ ನಡೆಸಿದಾಗ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಈವರೆಗೂ ಯಾವುದೇ ಬೇಡಿಕೆ ಈಡೇರಿಸಿಲ್ಲ ಬದಲಿಗೆ ಒತ್ತಡಗಳನ್ನು ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.
ಇ-ಪೌತಿ ಖಾತಾ ಕೈ ಬಿಡಬೇಕು. ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ನೀಡಬೇಕು. ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5 ಲಕ್ಷ ಮೇತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರ ಹೆಸರುಗಳಿಗೆ ವಾರಸುದಾರರ ಪ್ರಮಾಣ ಪತ್ರ, ಯಾವುದೇ ದಾಖಲೆಗಳಿಲ್ಲದಂತೆ ಪೌತಿ ಖಾತೆ ದಾಖಲಿಸುವಂತೆ ಈ ಪೌತಿ ಖಾತಾ ಆಂದೋಲನ ಕೈ ಬಿಡಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ತಡೆದು ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿರುವ ದಂಡನಾ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು. ಪೊಲೀಸ್ ಇಲಾಖೆಯಲ್ಲಿರುವಂತೆ ನೂರಾರು ಕೆಲಸಗಳನ್ನು ನಿರ್ವಹಿಸುವ ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನೊಳಗೊಂಡಂತೆ ಎಲ್ಲಾ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಬಹು ವರ್ಷದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಶಿರಸ್ತೇದಾರ್ ಎಸ್. ನಿರ್ಮಲಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮುಷ್ಕರದಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ ಉಪಾಧ್ಯಕ್ಷ ಎಸ್.ಎಚ್. ವಿನಯ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ಸುಧೀರ್ ಕಾನಡೆ, ಉಪಾಧ್ಯಕ್ಷ ಆರ್. ವೀರೇಂದ್ರ, ಕಾರ್ಯದರ್ಶಿ ಸಮೀರ್ ಕಳಾವಂತ್, ಖಜಾಂಚಿ ಶ್ರೀಕಾಂತ್, ನೌಕರರಾದ ಕೆ. ಮಂಜಪ್ಪ, ಲೋಹಿತ್ ಕುಮಾರ್, ಇಮಾಂ ಖಾಸಿಂ, ಡಿ.ಪಿ. ಮಂಜಪ್ಪ, ಭಾರತಿ ಪಾಟೀಲ್, ಯಲಪ್ಪ ಚಿಗರಿ, ಗಿರಿಮಲ್ಲಪ್ಪ ಉಳ್ಳಗಡ್ಡಿ, ಉಮೇಶ್, ಜಂಗಪ್ಪ ಗೌಡ ಬಿರಾದಾರ್, ರವಿಕುಮಾರ್, ಮಲ್ಲಪ್ಪ ಗದ್ದಿ, ಸಂಗೀತ ಚೌಹಾಣ, ದಾನೇಶ್ ಚಂಬಾರ್, ಮುತ್ತುಕುಮಾರ್, ಕೆ.ಟಿ. ಮಾರುತಿ, ಜಯಪ್ಪ ತುಮರಿಕೊಪ್ಪ, ಸಲಿಂ ಟಾಕಾಲಿ, ಮಲ್ಲಪ್ಪ ಬಿಜ್ಜರಿಗಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್ ಪಾಟೀಲ್, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ ಸೇರಿದಂತೆ ಇತರರಿದ್ದರು.
Post a Comment