ಸ್ವಾಮಿ ವಿವೇಕಾನಂದರ ಜೀವನದ ಆದರ್ಶಗಳನ್ನ ಮೈಗೂಡಿಸಿಕೊಳ್ಳಿ-ಕೀರ್ತಿ ಗಣೇಶ್

 

ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳನ್ನು ಪ್ರತಿಯೊಬ್ಬ ಯುವಕರೂ ಪಾಲಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಕೊಡುಗೆಗಳನ್ನು ನೀಡಬೇಕು ಎಂದು ಎನ್.ಎಸ್.ಯು.ಐ. ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ಕರೆ ನೀಡಿದರು.


ಅವರು ಇಂದು ಬೆಳಿಗ್ಗೆ ಇಲ್ಲಿನ ಮಹಾವೀರ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಯುವಕರು ದೇಶದ ಆಸ್ತಿ, ಯುವಕರಿಗೆ ಸರಿಯಾದ ಮಾರ್ಗದರ್ಶನ ಸೌಲಭ್ಯಗಳು ಸಿಕ್ಕರೆ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಎಂದ ಅವರು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಯುವಕರಿಗೆ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಸಾಲಸೌಲಭ್ಯ ಒದಗಿಸುವ ‘ವಿಶ್ವಾಸ್’ ಆಪ್ ಬಿಡುಗಡೆ ಮಾಡಿರುವುದಾಗಿ ಘೋಷಿಸಿದರು.


ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಮಾತನಾಡಿ, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡಿದ ದಿನವನ್ನು ನಮ್ಮೆಲ್ಲರ ಹುಟ್ಟುಹಬ್ಬದ ದಿನ ನೆನಪಿಟ್ಟುಕೊಳ್ಳುವಂತೆ ನೆನಪಿಟ್ಟುಕೊಳ್ಳಬೇಕು. ಅವರು 1893ರಲ್ಲಿ ಅವರು ಚಿಕಾಗೋದ ಸರ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ನಮ್ಮ ದೇಶದ ಘನತೆಯನ್ನು ಎತ್ತಿ ಹಿಡಿದಿತ್ತು ಎಂದರು.


ಮಾಜಿ ಸೂಡಾ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ಯುವ ಜನತೆ ಅದರಲ್ಲೂ ವಿದ್ಯಾರ್ಥಿಗಳು ವಿವೇಕಾನಂದರ ಬಗ್ಗೆ ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳಬೇಕು. ಅವರ ಕೃತಿಗಳನ್ನು ಓದಬೇಕು. ಆ ಮೂಲಕ ಅವರ ಆದರ್ಶ, ಗುರಿಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.


ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಶ್ವನಾಥ್ (ಕಾಶಿ) ಪಿ.ವಿ. ಮಾತನಾಡಿ, ವಿವೇಕಾನಂದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನು ಎನ್.ಎಸ್.ಯು.ಐ. ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಯುವ ಕಾಂಗ್ರೆಸ್‍ನ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಸ್ವಾಮಿ ವಿವೇಕಾನಂದರ ಕುರಿತು ಸಂಕ್ಷಿಪ್ತವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರು ಈಶ್ವರಚಂದ್ರಸಾಗರ್, ರಾಜಾರಾಮ ಮೋಹನರಾಯ್ ಮತ್ತು ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು. ಈ ಮೂವರ ಆದರ್ಶಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ದೇಶದ ಅಭಿವೃದ್ಧಿ ಯುವಕರಿಂದ ಮಾತ್ರ ಸಾಧ್ಯ ಎನ್ನುವುದನ್ನು ಮನಗಂಡಿದ್ದ ಅವರು, ಯುವಕರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದರು. ಅವರ ಸಾಧನೆ, ಯುವಕರಿಗೆ ಅವರ ಪ್ರೇರಣೆ ಅನನ್ಯ ಎಂದರು.


ಯುವಕರನ್ನು ಪ್ರೋತ್ಸಾಹಿಸಿ ಬೆಳೆಸಿದ ವಿವಿಧ ಕ್ಷೇತ್ರಗಳ ಸಾಧಕರಾದ ಸೇಕ್ರೇಟ್ ಹಾರ್ಟ್ ಪಿಇ ಕಿರಣ್, ಡ್ಯಾನ್ಸ್ ಮಾಸ್ಟರ್ ಅರುಣ್ ಶೆಟ್ಟಿ, ಕರಾಟೆ ಮಾಸ್ಟರ್ ಮುರುಳಿ, ಸಮಾಜ ಸೇವಕ - ಯುವ ಹೋರಾಟಗಾರ ಮುರುಗೇಶ್, ವಕೀಲ ಸಿರಾಜ್ ಇವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಂ ಪಾಶ, ಶಿವಕುಮಾರ್ , ಮಹಾನಗರ ಪಾಲಿಕೆ ಮಾಜಿ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ್, ನಗರಾಧ್ಯಕ್ಷ ಚರಣ್, ಪ್ರಮುಖರಾದ ರವಿ ಕಾಟಿಕೆರೆ, ಚಂದ್ರೋಜಿರಾವ್, ರಂಗೇನಹಳ್ಳಿ ರವಿ, ಜೀವನ್, ಸಿ.ಜಿ. ಮಧುಸೂದನ್, ಕೆ. ಚೇತನ್, ಅಬ್ದುಲ್ಲಾ, ಹರ್ಷಿತ್ ಸೇರಿದಂತೆ ಹಲವರಿದ್ದರು.

Post a Comment

Previous Post Next Post