ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಅಧಿವೇಶನದಲ್ಲಿ ಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಕೊರಚ ಸಮುದಾಯವನ್ನ ಒಳಮೀಸಲಾತಿ ಮತ್ತು ಮೀಸಲಾತಿಯಿಂದಲೇ ಹೊರಗಿಡಬೇಕೆಂದಿರುವುದು ಕೊರಚ ಸಮುದಾಯದ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕೊರಚ ಮಹಾಸಂಘದ ಗೌರವಾಧ್ಯಕ್ಷ ಪ್ರಭು ಕೆ.ಎನ್, ಬ್ರಿಟೀಶರ ಕಾಲದಲ್ಲಿ ಕೊರಚರಿಗೆ ಕಳ್ಳರು ಎಂಬುದಾಗಿ ಹಣೆಪಟ್ಟಿ ಕಟ್ಟಲಾಯಿತು. ನಮ್ಮ ಜನಾಂಗಕ್ಕೆ ಐಎಎಸ್, ಕೆಎಎಸ್ ಇಲ್ಲ. ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ವಾಪಾಸ್ ಪಡೆಯದಿದ್ದರೆ ಪ್ರತಿಭಟಿಸಲಾಗುವುದು ಎಂದರು.
ಕೊರಚ ಜನಾಂಗವನ್ನ ಒಳಮೀಸಲಾತಿ ಮತ್ತು ಕೊರಚ ಜನಾಂಗವನ್ನ ಮೀಸಲಾತಿಯಿಂದಲೇ ತೆಗೆಯಬೇಕು ಎಂಬುದನ್ನ ವಾಪಾಸ್ ಪಡೆಯಬೇಕಂದು ಆಗ್ರಹಿಸಿ ಡಿ. 30 ರಂದು ಡಿಸಿ ಕಚೇರಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಕೊರಚರ ಇತಿಹಾಸ ನಾರಾಯಣ ಸ್ವಾಮಿಗೆ ಗೊತ್ತಿಲ್ಲ. ಎತ್ತುಗಾಡಿ ಓಡಾಡಿಸಿಕೊಂಡಿದ್ದ ಕೊರಚರು ರೈಲುಗಾಡಿ ಆವಿಷ್ಕಾರವಾದಾಗ ಅಲೆಮಾರಿಗಳಾದರು. ಕಳ್ಳತನಕ್ಕೆ ಕೈಹಾಕಿದರು. ಅವರನ್ನ ಬ್ರಿಟಿಷರು ಸೆಟ್ಲಮೆಂಟ್ ಏರಿಯಾಗಳಾದ ಮುಂಬೈ, ಬೆಂಗಳೂರು, ಹುಬ್ಬಳ್ಳಿ ಮೊದಲಾದ ಐದು ಕಡೆ ಬಂಧಿಸುತ್ತಿದ್ದರು. ಊರಿಗೆ ಹೋಗಲು ಶಾನಬೋಗರ ಚೀಟಿ ಪಡೆದು ಹೋಗಿ ವಾಪಾಸ್ ಬಂಧಿಖಾನೆಗೆ ಹೋಗಬೇಕಿದ್ದ ಪರಿಸ್ಥಿತಿಯಿತ್ತು. ರಾಜ್ಯದಲ್ಲಿ 2 ಮುಕ್ಕಾಲು ಲಕ್ಷ ಜನಾಂಗವಿದೆ. ಒಬ್ಬ ಐಎಎಸ್, ಕೆಎಎಸ್, ಎಂಎಲ್ ಎ ಮತ್ತು ಎಂಪಿಗಳಿಲ್ಲ ಎಂದರು.
ನಾರಾಯಣ ಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಬುದ್ದಿವಾದ ಹೇಳಬೇಕು. 15 ದಿನಗಳ ಒಳಗೆ ಕ್ಷಮೆಯಾಚಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
Post a Comment