ಪೌರಕಾರ್ಮಿಕರಿಗೆ ರಿಲೀಫ್: ಪಿಎಫ್ ಬಾಕಿ ಪಾವತಿಸಲು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

 

Pourakarmikas PF: ಪಿಎಫ್​ ವಿಚಾರದಲ್ಲಿ ಕೊನೆಗೂ ಬೆಂಗಳೂರಿನ ಪೌರಕಾರ್ಮಿಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. 2011 ರ ಜನವರಿಯಿಂದ 2017 ರ ಜುಲೈ ಅವಧಿಯಲ್ಲಿ ಬಾಕಿ ಇರಿಸಿಕೊಂಡಿರುವ ಪಿಎಫ್ ಮೊತ್ತವನ್ನು ಬಡ್ಡಿ ಸಮೇತ ನೀಡುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್​ ಆದೇಶಿಸಿದೆ. ಇದರೊಂದಿಗೆ, ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.


ಬೆಂಗಳೂರು, ಫೆಬ್ರವರಿ 16: ಪೌರಕಾರ್ಮಿಕರಿಗೆ (Pourakarmikas) 2011 ರ ಜನವರಿಯಿಂದ 2017 ರ ಜುಲೈ ನಡುವಣ ಅವಧಿಯಲ್ಲಿ ನೀಡಬೇಕಿದ್ದ 90,18,89,719 ಭವಿಷ್ಯ ನಿಧಿ (PF) ಬಾಕಿಯನ್ನು ಎಂಟು ವಾರಗಳಲ್ಲಿ ಪಾವತಿಸುವಂತೆ ಬಿಬಿಎಂಪಿಗೆ (BBMP)ಕರ್ನಾಟಕ ಹೈಕೋರ್ಟ್ (Karnataka High Court) ಸೂಚನೆ ನೀಡಿದೆ. ಬಿಬಿಎಂಪಿ ಪೌರಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ನ್ಯಾಯಮೂರ್ತಿ ಕೆಎಸ್ ಹೇಮಲೇಖಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಉದ್ಯೋಗದಾತರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಸೆಕ್ಷನ್ 7A ಗೆ ಅನುಗುಣವಾಗಿ ಶೇ 12 ದರದಲ್ಲಿ ಸರಳ ಬಡ್ಡಿಯೊಂದಿಗೆ ಮೊತ್ತವನ್ನು ಠೇವಣಿ ಮಾಡುವಂತೆ 2017 ರ ಅಕ್ಟೋಬರ್ 26 ರಂದು ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಆದೇಶವನ್ನು ಹೊರಡಿಸಿದ್ದರು. ಸಂಘವು ಆದೇಶದ ಅನುಷ್ಠಾನಕ್ಕೆ ನಿರ್ದೇಶನಗಳನ್ನು ಕೋರಿ ಅರ್ಜಿ ಸಲ್ಲಿಸಿತ್ತು. ಏತನ್ಮಧ್ಯೆ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಆದೇಶವನ್ನು ಪ್ರಶ್ನಿಸಿ ಬಿಬಿಎಂಪಿ ನ್ಯಾಯಾಲಯದ ಮೆಟ್ಟಿಲೇರಿತ್ತು.

ಇಪಿಎಫ್ ಮತ್ತು ಎಂಪಿ ಕಾಯಿದೆಯ ಸೆಕ್ಷನ್ 2(ಎಫ್) ಮತ್ತು ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಆಕ್ಟ್ 1948ರ ಸೆಕ್ಷನ್ 2(9) ಎರಡರಲ್ಲೂ ‘ನೌಕರ’ ವ್ಯಾಪ್ತಿಯೊಳಗೆ ಗುತ್ತಿಗೆ ಕಾರ್ಮಿಕರನ್ನು ಸೇರಿಸಿರುವುದನ್ನು ಗಮನಿಸಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಪರಿಸ್ಥಿತಿ ಹೀಗಿರುವಾಗ, ಅರ್ಜಿದಾರರು ಉಲ್ಲೇಖಿಸಿರುವಂತೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಗ್ರ್ಯಾಚುಯಿಟಿ ಮತ್ತು ಪಿಎಫ್ ಪಡೆಯಲು ಅರ್ಹರಲ್ಲ ಎಂಬ ವಾದವನ್ನು ಒಪ್ಪಲಾಗದು. ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು 2017 ರ ಅಕ್ಟೋಬರ್ 26 ರಂದು ಸೆಕ್ಷನ್ 7ರ ಅಡಿಯಲ್ಲಿ ನೀಡಿದ್ದ ಆದೇಶವನ್ನು ಅನುಷ್ಠಾನಗೊಳಿಸಲೇಬೇಕು ಎಂದು ಹೈಕೋರ್ಟ್ ಹೇಳಿದೆ.ಬಿಬಿಎಂಪಿ ವೈಫಲ್ಯದಿಂದ ಕಾರ್ಮಿಕರು ಆರ್ಥಿಕ ಹಾಗೂ ಮಾನಸಿಕವಾಗಿ ನೊಂದಿದ್ದಾರೆ. ಕುಡಿಯುವ ನೀರು, ಶೌಚಾಲಯ ಇತ್ಯಾದಿ ಸೌಕರ್ಯಗಳು ಸಮರ್ಪಕವಾಗಿಲ್ಲದ ಅವರ (ಪೌರಕಾರ್ಮಿಕರು) ಕೆಲಸದ ಪರಿಸ್ಥಿತಿ ಮತ್ತು ಸ್ಥಳಗಳು ಶೋಚನೀಯವಾಗಿವೆ. ಇದು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಎದ್ದು ಕಾಣಿಸಿತ್ತು. ಸಂಪನ್ಮೂಲ, ಸೌಕರ್ಯಗಳ ಕೊರತೆ ಹೊರತಾಗಿಯೂ ಪೌರಕಾರ್ಮಿಕರು ಅವರ ಕೆಲಸವನ್ನು ಮಾಡಿದ್ದಾರೆ. ಕೋವಿಡ್ ಲಾಕ್​ಡೌನ್​ನಂಥ ಗಂಭೀರ ಪರಿಸ್ಥಿತಿಗಳಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಅರ್ಹವಾಗಿ ದೊರೆಯಬೇಕಿರುವ ಸವಲತ್ತುಗಳು ದೊರೆಯಲೇಬೇಕು ಎಂದು ನ್ಯಾಯಮೂರ್ತಿ ಹೇಮಲೇಖಾ ಹೇಳಿದ್ದಾರೆ.

Post a Comment

Previous Post Next Post