ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಕ್ಕೆ ಅನ್ಯಾಯ ಆಗದಂತೆ ತಡೆಯಲು ಸಂವಿಧಾನ ತಿದ್ದುಪಡಿ ಮಾಡಿ ಸೆಸ್ ಮತ್ತು ಸರ್ ಜಾರ್ಜ್ ನಲ್ಲೂ ನಮಗೆ ಪಾಲು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು: ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಕ್ಕೆ ಅನ್ಯಾಯ ಆಗದಂತೆ ತಡೆಯಲು ಸಂವಿಧಾನ ತಿದ್ದುಪಡಿ ಮಾಡಿ ಸೆಸ್ ಮತ್ತು ಸರ್ ಜಾರ್ಜ್ ನಲ್ಲೂ ನಮಗೆ ಪಾಲು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬುಧವಾರ ನಡೆದ' ನಮ್ಮ ಹಕ್ಕು ನಮ್ಮ ತೆರಿಗೆ ಅಭಿಯಾನ ಕುರಿತ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ, ಸಂವಿಧಾನ ಬದ್ಧವಾದ ಒಕ್ಕೂಟ ವ್ಯವಸ್ಥೆಯನ್ನು ಇಡೀ ದೇಶ ಒಪ್ಪಿಕೊಂಡಿದೆ. ರಾಜ್ಯ ಮತ್ತು ಕೇಂದ್ರಗಳಿಗೆ ಜನರ ತೆರಿಗೆ ಹಣ ಹಂಚಿಕೆಯಾಗುತ್ತದೆ. ಇದಕ್ಕಾಗಿ 5 ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚನೆಯಾಗಿ ಇದರ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತದೆ ಎಂದರು.
ಸೆಸ್ ಮತ್ತು ಸರ್ ಜಾರ್ಜ್ ನಿಂದ ಸಂಗ್ರಹ ಆಗಿದ್ದ ತೆರಿಗೆಯಲ್ಲಿ ಒಂದು ರೂಪಾಯಿಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಡುವುದಿಲ್ಲ. ಆದ್ದರಿಂದ ಅದರಲ್ಲೂ ನಾವು ಪಾಲು ಕೇಳಬೇಕು ಎಂದು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ಇದೇ ಕಾರಣಕ್ಕೆ ನಾನು ನನ್ನ ತೆರಿಗೆ ನನ್ನ ತೆರಿಗೆ ಹಕ್ಕು ಎಂದು ಹೇಳುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು.
ನಾವು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಚೀನಾ ಮಾದರಿಯ ಏಕಸ್ವಾಮ್ಯ ಸಹಿಸಲು, ಅಮೆರಿಕದ ಅಧ್ಯಕ್ಷೀಯ ಮಾದರಿ ಆಡಳಿತ ಒಪ್ಪಿಕೊಳ್ಳಲು ಸಾಧ್ಯವಿಲ್ಲ ರಾಜ್ಯಗಳ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ? ರಾಜ್ಯಗಳು ದುರ್ಬಲ ಆದರೆ ದೇಶ ದುರ್ಬಲ ಆಗುತ್ತದೆ. ರಾಜ್ಯಗಳು ಸುಭದ್ರ ಆಗಿದ್ದರೆ ದೇಶವೂ ಸುಭದ್ರ ಆಗುತ್ತದೆ ಎಂದು ಹೇಳಿದರು.
ನಮ್ಮ ಸಂಸದರು, ಕೇಂದ್ರದಲ್ಲಿ ಮಂತ್ರಿಗಳಾಗಿರುವವರು ಯಾರೂ ದೆಹಲಿಯಲ್ಲಿ ಈ ಅನ್ಯಾಯವನ್ನು ಪ್ರಶ್ನಿಸುವುದೇ ಇಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದುಕೊಂಡು, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುತ್ತೇವೆ ಎಂದರು.
Post a Comment