'ರಾಮಲಲ್ಲಾ' ಪ್ರಾಣಪ್ರತಿಷ್ಠೆಗೆ ಮುನ್ನವೇ ರಾಮಮಂದಿರ ಟ್ರಸ್ಟ್ ಗೆ ಹರಿದು ಬರುತ್ತಿದೆ ದೇಣಿಗೆಯ ಮಹಾಪೂರ

 ಅಯೋಧ್ಯೆ: ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಮೂರು ವಾರಗಳಿಗೂ ಕಡಿಮೆ ಅವಧಿ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿದಿನೇದಿನೆ ರಾಮ ಮಂದಿರದ ಟ್ರಸ್ಟ್‌ ಹೆಸರಿಗೆ ಜಮೆಯಾಗುತ್ತಿರುವ ದೇಣಿಗೆ (ನಗದು, ದಾನಪತ್ರ, ಡಿಜಿಟಲ್‌ ಪೇಮೆಂಟ್‌ ಹಾಗೂ ಇತರ) ಪ್ರಮಾಣವು ದಾಖಲೆ ಮಟ್ಟ ತಲುಪುತ್ತಿದೆ ಎಂದು ತಿಳಿದುಬಂದಿದೆ. ಕಳೆದ ಒಂದು ತಿಂಗಳಲ್ಲಿ1.5 ಕೋಟಿ ರೂ.ಗೂ ಹೆಚ್ಚು ಮೊತ್ತದ ದೇಣಿಗೆಯು ಮಂದಿರಕ್ಕೆ ಹರಿದುಬಂದಿದೆ.


ದೇಣಿಗೆ ಸಂಗ್ರಹದ ತಂಡದ ಮುಖ್ಯಸ್ಥರಾಗಿರುವ ಸುಭಾಷ್‌ ಚಂದ್ರ ಶ್ರೀವಾಸ್ತವ ಅವರ ಪ್ರಕಾರ, '' ಮಂದಿರದ ನಿರ್ವಹಣೆ ಹೊಣೆಯನ್ನು ಟ್ರಸ್ಟ್‌ನ ಉಸ್ತುವಾರಿಗೆ ವಹಿಸಿದ ಸಂದರ್ಭದಲ್ಲಿ ರಾಮಲಲ್ಲಾಹೆಸರಲ್ಲಿಕೇವಲ ಮಾಸಿಕ 70 ಸಾವಿರ ರೂ. ಕಾಣಿಕೆ ಹರಿದುಬರುತ್ತಿತ್ತು. ಆದರೆ, ಮಂದಿರ ನಿರ್ಮಾಣ ಶುರುವಾದಂತೆ ಹಾಗೂ ಗರ್ಭಗೃಹದ ಫೋಟೊಗಳು ಬಿಡುಗಡೆಯಾದ ಬಳಿಕ ಹಂತಹಂತವಾಗಿ ಕಾಣಿಕೆ ಪ್ರಮಾಣದಲ್ಲಿಏರಿಕೆ ಕಂಡಿದೆ. ಸದ್ಯ ತಿಂಗಳಿಗೆ 2.5 ಕೋಟಿ ರೂ.ಗೂ ಹೆಚ್ಚು ಸಂದಾಯವಾಗುತ್ತಿದೆ. ಮೇ ತಿಂಗಳವರೆಗೆ ನಡೆದ ಸಂಕಲ್ಪ ಸಮರ್ಪಣೆ ಅಭಿಯಾನದಲ್ಲಿ 3,300 ಕೋಟಿ ರೂ. ದೇಣಿಗೆ ಹರಿದುಬಂದಿದೆ,'' ಎಂದು ತಿಳಿಸಿದ್ದಾರೆ. ಕಾಣಿಕೆ ಹುಂಡಿಯಲ್ಲಿನ ಎಣಿಕೆಗಾಗಿ 12 ಬ್ಯಾಂಕ್‌ಗಳ ಸಿಬ್ಬಂದಿಗಳನ್ನು ಒಳಗೊಂಡ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಟ್ರಸ್ಟ್‌ ಮೂಲಗಳು ತಿಳಿಸಿವೆ.

ಲಕ್ಷ ಮಂದಿಗೆ ಪ್ರಸಾದ ವ್ಯವಸ್ಥೆ

ಜ.22ರ ನಂತರ ನಿತ್ಯ 1 ಲಕ್ಷ ಮಂದಿ ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯ ಹಿನ್ನೆಲೆಯಲ್ಲಿಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. 2024ರ ಜ.1ರಂದು 50 ಸಾವಿರಕ್ಕೂ ಹೆಚ್ಚು ಮಂದಿ ರಾಮಲಲ್ಲಾನ ದರ್ಶನ ಪಡೆದಿದ್ದು, ಅಂದು ಒಂದೇದಿನ 5 ಲಕ್ಷ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ ಎಂದು ಟ್ರಸ್ಟ್‌ ಮೂಲಗಳು ತಿಳಿಸಿವೆ.

ಗರ್ಭಗೃಹದ ರಾಮಲಲ್ಲಾ ಕರ್ನಾಟಕದ ಕೃಷ್ಣ ಶಿಲೆಯದ್ದೆ?

'' ಗರ್ಭಗೃಹದ ರಾಮಲಲ್ಲಾವಿಗ್ರಹವು ಕೃಷ್ಣ ಶಿಲೆಯದ್ದಾಗಿರಲಿದೆ,'' ಎನ್ನುವ ಮೂಲಕ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರು ಕರ್ನಾಟಕದ ಶಿಲ್ಪಿಗಳ ರಾಮನ ವಿಗ್ರಹವು ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ ಎಂಬ ಸುಳಿವು ಕೊಟ್ಟಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಚಂಪತ್‌ ರಾಯ್‌,'' ಶ್ಯಾಮಲ ವರ್ಣದ ಮೂರ್ತಿಯನ್ನು ಗರ್ಭಗೃಹದಲ್ಲಿನೀವು ಕಾಣುವಿರಿ. ಭಗವಾನ್‌ ವಿಷ್ಣುವಿನ ಅವತಾರವಾದ ಹಿನ್ನೆಲೆಯಲ್ಲಿಮೂರ್ತಿಯಲ್ಲಿದೈವತ್ವವು ಅಂತರ್ಗತವಾಗಿದೆ. ರಾಜಕುಮಾರನಂತೆಯೂ ಮೂರ್ತಿ ಕಾಣಲಿದೆ, ಜತೆಗೆ 5 ವರ್ಷದ ಬಾಲಕನಾಗಿಯೂ (51 ಇಂಚು ಎತ್ತರ) ಆಕರ್ಷಿಸಲಿದೆ'' ಎಂದು ಸುಳಿವು ಕೊಟ್ಟಿದ್ದಾರೆ.
'' ಗರ್ಭಗೃಹದಲ್ಲಿರಾಮಲಲ್ಲಾಪ್ರತಿಮೆಗಾಗಿ ನಿರ್ಮಿಸಲಾಗಿರುವ ಪೀಠದ ಮೇಲೆ ಜ.18ರಂದು ಮಧ್ಯಾಹ್ನದ ವೇಳೆಗೆ ಮೂರ್ತಿಯನ್ನು ಇರಿಸಲಾಗುವುದು. ನಂತರ ಹಲವಾರು ಪೂಜಾ ವಿಧಾನಗಳು ನೆರವೇರಲಿವೆ. ಜ.16 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಲಿವೆ,'' ಎಂದು ಟ್ರಸ್ಟ್‌ನ ಸದಸ್ಯರಾದ ಡಾ. ಅನಿಲ್‌ ಮಿಶ್ರಾ ಅವರು ತಿಳಿಸಿದ್ದಾರೆ.

ಪೇಟಿಎಂ ಜತೆ ಒಪ್ಪಂದ

ಅಯೋಧ್ಯೆ ನಗರಿಯಲ್ಲಿ ಜ.22ರಂದು ವಾಣಿಜ್ಯ ಚಟಿವಟಿಕೆಗಳ ಡಿಜಿಟಲ್‌ ಪಾವತಿಗೆ ಅನುಕೂಲ ಕಲ್ಪಿಸಲು ಪೇಟಿಎಂ ಜತೆ ಅಯೋಧ್ಯೆ ನಗರ ನಿಗಮ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ಎರಡೂ ಸಂಸ್ಥೆಗಳು ಶುಕ್ರವಾರ ಅಧಿಕೃತವಾಗಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ. ''ಹೋಟೆಲ್‌, ಅಂಗಡಿ ಮತ್ತಿತರ ಕಡೆ ಡಿಜಿಟಲ್‌ ಪಾವತಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗುವುದು. ಅದಕ್ಕಾಗಿ ಅಗತ್ಯ ಪ್ರಮಾಣದ ಕ್ಯೂಆರ್‌ ಕೋಡ್‌ ಮತ್ತು ಕಾರ್ಡ್‌ ಮಶಿನ್‌ಗಳನ್ನು ಒದಗಿಸಲಾಗುವುದು,'' ಎಂದು ಪೇಟಿಎಂ ಮುಖ್ಯ ವಾಣಿಜ್ಯ ಅಧಿಕಾರಿ ಅಭಯ್‌ ಶರ್ಮಾ ತಿಳಿಸಿದ್ದಾರೆ.

Post a Comment

Previous Post Next Post