ಪ್ರಧಾನಿ ಅವರೇ, ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು...
ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪ್ರಧಾನಿ ಅವರೇ, ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು ಅಯೋಧ್ಯೆಯಲ್ಲಿ ತಾವು ಇಂದು ಉದ್ಘಾಟಿಸುತ್ತಿರುವ ರಾಮಮಂದಿರದಲ್ಲಿ ನಿಂತು ಪ್ರಮಾಣ ಮಾಡಿ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಯ್ಯ ಅವರು, ನಿಮಗೆ ಆ ಧೈರ್ಯವಿಲ್ಲ, ಅದು ಬರುವುದೂ ಇಲ್ಲ. ಏಕೆಂದರೆ ರಾಮ, ನಿಮಗೆ ಚುನಾವಣಾ ಅಸ್ತ್ರ ಮಾತ್ರ. ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ನೀಡಿದ್ದಿರಿ. ಆದರೆ, ಇದಕ್ಕಾಗಿ ಏನು ಮಾಡಿದಿರಿ? ಎಂದು ಪ್ರಶ್ನಿಸಿದ್ದಾರೆ.
ರೈತರ ಆದಾಯ ದ್ವಿಗುಣಗೊಳಿಸುವುದಿರಲಿ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಬಿಡಿಗಾಸು ಬರ ಪರಿಹಾರವನ್ನೂ ನೀವು ನೀಡಿಲ್ಲ. ಅದೇ ರೀತಿ, ಒಕ್ಕೂಟ ವ್ಯವಸ್ಥೆಯಲ್ಲಿರುವ ಎಲ್ಲ ರಾಜ್ಯಗಳ ಸಶಕ್ತೀಕರಣಕ್ಕಾಗಿ ಸಹಕಾರಿ ಒಕ್ಕೂಟ ವ್ಯವಸ್ಥೆಯ ನಿರ್ಮಾಣದ ಬಗ್ಗೆ ಭರವಸೆ ನೀಡಿದ್ದಿರಿ. ವಿಪರ್ಯಾಸವೆಂದರೆ, ಇಂದು ರಾಜ್ಯಗಳಿಗೆ ದಕ್ಕಬೇಕಾದ ಅವುಗಳ ನ್ಯಾಯಯುತ ಪಾಲನ್ನು ಕೂಡ ಕಸಿದುಕೊಂಡಿದ್ದೀರಿ. ಇದರೊಟ್ಟಿಗೆ ಕುತಂತ್ರದಿಂದ ಸೆಸ್, ಸರ್ಚಾರ್ಜ್‌ಗಳನ್ನು ಹೆಚ್ಚಿಸಿದ್ದೀರಿ.
ಪ್ರಧಾನಿ ಮೋದಿ ಅವರೇ, ದೇಶದ ಭದ್ರತೆಯ ಬಗ್ಗೆ ನಿಮ್ಮ ಪ್ರಣಾಳಿಕೆಯಲ್ಲಿ ಪುಂಖಾನುಪುಂಖ ಆಶ್ವಾಸನೆಗಳನ್ನು ಕೊಟ್ಟಿದ್ದಿರಿ. ಆದರೆ, ಗಡಿಯೊಳಗೆ ಅತಿಕ್ರಮಣ ಮಾಡಿ ಅಕ್ರಮ ಸೇನಾ ನಿರ್ಮಾಣ ಚಟುವಟಿಕೆ ಕೈಗೊಂಡಿರುವ ಚೀನಾವನ್ನು ಹಿಂದಕ್ಕೆ ಕಳುಹಿಸಲಾಗದೆ ಚೀನಾ ನಮ್ಮ ಗಡಿಯನ್ನು ಪ್ರವೇಶಿಸಿಯೇ ಇಲ್ಲ ಎನ್ನುವ ಹೇಳಿಕೆ ನೀಡಿಬಿಟ್ಟಿರಿ! ಆ ಮೂಲಕ ಮುಂದಕ್ಕೆ ಇದ್ದ ಗಡಿ ರೇಖೆಯನ್ನು ಹಿಂದಕ್ಕೆ ಎಳೆದ ಶೂರ ನೀವು! ಯಾವ ಗಡಿ ರೇಖೆಯನ್ನು ಕಾಯುವುದಕ್ಕಾಗಿ ನಮ್ಮ ಪರಾಕ್ರಮಿ ಸೈನಿಕರು ಸಂಘರ್ಷ ನಡೆಸಿ ತಮ್ಮ ಪ್ರಾಣವನ್ನೇ ಸಮರ್ಪಿಸಿದರೋ ಆ ಸೈನಿಕರಿಗೆ ನೀವು ಮರಣೋತ್ತರ ಅವಮಾನ ಮಾಡಿದಿರಿ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೀಗೆ, ವಚನ ಪರಿಪಾಲನೆ ಎಂದರೇನು ಎಂಬುದೇ ತಿಳಿಯದ ನೀವು ಯಾವ ಸೀಮೆಯ ರಾಮಭಕ್ತ? ಮತ್ತೊಮ್ಮೆ ಹೇಳುತ್ತೇನೆ, ಅಧಿಕಾರದಲ್ಲಿರುವವರಿಂದ ರಾಮ ನಿರೀಕ್ಷಿಸುವುದು ಶಾಂತಿ, ನೆಮ್ಮದಿ, ಸಹಬಾಳ್ವೆಯ ರಾಮರಾಜ್ಯದ ನಿರ್ಮಾಣವನ್ನು ಮಾತ್ರ ಎಂದು ಹೇಳಿದ್ದಾರೆ.
“ನನಗೆ ತಿಳಿದಿರುವ ರಾಮ, ನಾನು ಪೂಜಿಸುವ ರಾಮ ವಚನ ಪರಿಪಾಲನೆಯನ್ನೇ ತನ್ನ ಉಸಿರಾಗಿಸಿಕೊಂಡವನು. ನನಗೆ ತಿಳಿದಿರುವ ಹನುಮ, ನಾನು ಪೂಜಿಸುವ ಹನುಮ ರಾಮನಾಮಕ್ಕಿಂತ ಮಿಗಿಲಿಲ್ಲ, ರಾಮನೇ ಜಗವೆಲ್ಲಾ ಎಂದು ತಿಳಿದು ರಾಮಭಕ್ತಿಯನ್ನೇ ಎದೆಯೊಳಗೆ ಇಳಿಸಿಕೊಂಡವನು. ಹನುಮನ ನಾಡಿನವರಾದ ನಮಗೆ ರಾಮನ ಬಗ್ಗೆ, ರಾಮಭಕ್ತಿಯ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ಅದೊಂದು ತೋರ್ಪಡಿಕೆಯ ವಿದ್ಯಮಾನವೂ ಅಲ್ಲ. ರಾಮಭಕ್ತಿ ನಿರಂತರ. ವೈಯಕ್ತಿಕವಾಗಿ ನಾನು, ರಾಮನಿಂದ ವಚನ ಪರಿಪಾಲನೆಯನ್ನು, ಭೀಮನಿಂದ(ಡಾ. ಅಂಬೇಡ್ಕರ್) ಸಮತೆ ಅನುಷ್ಠಾನವನ್ನು, ಬಸವನಿಂದ ನುಡಿ, ನಡೆಯ ನಡುವೆ ಅಂತರವಿಲ್ಲದೆ ಬದುಕುವುದನ್ನು ನನ್ನಲ್ಲಿ ಅಳವಡಿಸಿಕೊಳ್ಳುತ್ತಲೇ ಮುಂದುವರಿದಿದ್ದೇನೆ” ಎಂದು ಸಿಎಂ ತಿರುಗೇಟು ನೀಡಿದ್ದಾರೆ.
“ಹನುಮನ ನಾಡಿನವರಾದ ನಾವು ಹನುಮನ ಎದೆಗಿಂತ ಮಿಗಿಲಾದ ಗುಡಿ ರಾಮನಿಗೆ ಬೇರಾವುದೂ ಇಲ್ಲ ಎಂದು ತಿಳಿದೇ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ಊರೂರಿನಲ್ಲಿಯೂ ಹನುಮನಿಗೆ ಗುಡಿ ಕಟ್ಟಿದೆವು. ರಾಮನಿಗೆ ಹನುಮನ ಎದೆಗಿಂತ ಬೇರಾವುದಾದರೂ ಶ್ರೇಷ್ಠ ಗುಡಿಯನ್ನು ಈ ಜಗತ್ತಿನಲ್ಲಿ ಯಾರಾದರೂ ಕಟ್ಟಲು ಸಾಧ್ಯವೇ? ನಿಜ ರಾಮಭಕ್ತರು ಉತ್ತರ ಹೇಳಬೇಕು. ರಾಮ ತನ್ನ ಭಕ್ತರಲ್ಲಿ ನೋಡುವುದು ಅವರ ಸತ್ಯಸಂಧತೆ, ವಚನ ಪರಿಪಾಲನೆಯನ್ನೇ ಹೊರತು ಡಾಂಭಿಕತೆಯನ್ನಲ್ಲ. ರಾಜಕಾರಣಿಗಳಿಂದ ರಾಮ ನಿರೀಕ್ಷಿಸುವುದು ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಕೂಡಿದ ರಾಮರಾಜ್ಯದ ನಿರ್ಮಾಣವನ್ನು ಮಾತ್ರ” ಎಂದಿದ್ದಾರೆ.
Post a Comment