ಶತಮಾನಗಳ ಬೇಡಿಕೆ ಅಯೋಧ್ಯೆಯ ಶ್ರೀರಾಮಚಂದ್ರ ದೇಗುಲ ಕೊನೆಗೂ ಉದ್ಧಾಟನೆಯಾಗುತ್ತಿದ್ದು, ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತರು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.
ರಾಮಮಂದಿರ ಉದ್ಙಾಟನಾ ಕಾರ್ಯಕ್ರಮ
ಅಯೋಧ್ಯೆ: ಶತಮಾನಗಳ ಬೇಡಿಕೆ ಅಯೋಧ್ಯೆಯ ಶ್ರೀರಾಮಚಂದ್ರ ದೇಗುಲ ಕೊನೆಗೂ ಉದ್ಧಾಟನೆಯಾಗುತ್ತಿದ್ದು, ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತರು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.
ಈ ವೈಭವೋಪೇತ ಕಾರ್ಯಕ್ರಮಕ್ಕೆ ದೇಶದ ವಿವಿಧ ವಲಯಗಳ 7 ಸಾವಿರಕ್ಕೂ ಅಧಿಕ ಗಣ್ಯರು ಆಗಮಿಸುತ್ತಿದ್ದು, ಈಗಾಗಲೇ ಬಹುತೇಕ ಗಣ್ಯರು ಅಯೋಧ್ಯೆ ತಲುಪಿದ್ದಾರೆ. ಅಂತೆಯೇ ಈ ಆಯ್ದ ಪಟ್ಟಿಯಲ್ಲಿ 506 ಎ-ಲಿಸ್ಟರ್ ಗಣ್ಯರೂ ಕೂಡ ಇದ್ದು, ಸಂಗೀತ ಪ್ರಪಂಚದ ಕೆಲವು ದೊಡ್ಡ ಹೆಸರುಗಳೂ ಕೂಡ ಈ ಪಟ್ಟಿಯಲ್ಲಿದೆ.
ಕ್ರಿಕೆಟ್ ಜಗತ್ತು, ಚಲನಚಿತ್ರ ಜಗತ್ತು, ಸಂತ ಸಮಾಜ, ರಾಜಕೀಯ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮತ್ತು ಇತರ ಕ್ಷೇತ್ರಗಳ ವಿಶೇಷ ಅತಿಥಿಗಳನ್ನು ಈ ಭವ್ಯ ಸಮಾರಂಭಕ್ಕೆ ಹಾಜರಾಗಲು ಆಹ್ವಾನಿಸಲಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮತ್ತು ಕ್ರೀಡಾ ಐಕಾನ್ ಸಚಿನ್ ತೆಂಡೂಲ್ಕರ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಪ್ರಮುಖ ವ್ಯಕ್ತಿಗಳಲ್ಲಿ ಸೇರಿದ್ದಾರೆ. ಹೀಗಾಗಿ ಇಡೀ ಕಾರ್ಯಕ್ರಮಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ.
ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಬಿಗಿ ಭದ್ರತೆಯ ನಡುವೆ ಬಾಲರಾಮ (ರಾಮಲಲ್ಲಾ) ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ‘ಮಂಗಲಧ್ವನಿ’ ಎಂಬ ಬೆರಗುಗೊಳಿಸುವ ಸಂಗೀತ ಕಾರ್ಯಕ್ರಮದ ಮೂಲಕ ಗುರುತಿಸಲ್ಪಡುತ್ತದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಾನುವಾರ ಪ್ರಕಟಿಸಿದೆ. ಪ್ರಪಂಚದಾದ್ಯಂತದ ಹಿಂದೂ ಸಮುದಾಯದ ಜನರು ಈ ಐತಿಹಾಸಿಕ ಸಂದರ್ಭಕ್ಕಾಗಿ ತಮ್ಮ ಅತೀವ ಉತ್ಸಾಹ ಮತ್ತು ಗೌರವವನ್ನು ಪ್ರದರ್ಶಿಸುವ ಭವ್ಯವಾದ ಆಚರಣೆಗಳಿಗೆ ಸಜ್ಜಾಗುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ-ಪ್ರತಿಷ್ಠಾಪನಾ ಸಮಾರಂಭದ ವೈದಿಕ ಆಚರಣೆಗಳು ಜನವರಿ 16 ರಂದು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಪ್ರಾರಂಭವಾಗಿತ್ತು.
ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಶ್ರೀರಾಮ ಲಲ್ಲಾ ವಿಗ್ರಹವನ್ನು ಗುರುವಾರ ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗಿದ್ದು, ಇದೇ ವಿಗ್ರಹಕ್ಕೆ ಇಂದು ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಪ್ರತಿಷ್ಠಾಪನೆ ಸಮಾರಂಭದಲ್ಲಿ ಗರ್ಭಗುಡಿಯಲ್ಲಿ ಪವಿತ್ರ ಬಟ್ಟೆಯಿಂದ ಮುಚ್ಚಲ್ಪಟ್ಟ ವಿಗ್ರಹದ ಮೊದಲ ಫೋಟೋ ಈಗಾಗಲೇ ಬಹಿರಂಗವಾಗಿದ್ದು, ಇದು ಟ್ರಸ್ಟ್ ನ ಆಕ್ರೋಶಕ್ಕೂ ಕಾರಣವಾಗಿತ್ತು.
ಇದೀಗ ಇಂದು ಅಧಿಕೃತವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಬಳಿಕ ವಿಗ್ರಹದ ಮೂಲರೂಪ ಬಹಿರಂಗವಾಗಲಿದೆ.
Post a Comment