ಗಣರಾಜ್ಯೋತ್ಸವದ ಪ್ರಯುಕ್ತ ಹೊಸದಿಲ್ಲಿಯಲ್ಲಿ ಜನವರಿ 26ರಂದು ನಡೆಯಲಿರುವ ಪಥ ಸಂಚಲನದಲ್ಲಿ ಭಾಗವಹಿಸಲು ಕರುನಾಡಿನ ಸ್ತಬ್ಧ ಚಿತ್ರಕ್ಕೆ ಅನುಮತಿ ನಿರಾಕರಿಸಲಾಗಿದೆ.
ಪ್ರತಿ ವರ್ಷ ಗಣ ರಾಜ್ಯೋತ್ಸವದ ದಿನ ಹೊಸದಿಲ್ಲಿಯ ರಾಜಪಥ್‌ನಲ್ಲಿ(ಕರ್ತವ್ಯ ಪಥ) ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯುತ್ತದೆ. ಸತತ 14 ವರ್ಷಗಳಿಂದ ಗಣರಾಜೋತ್ಸವ ಪರೇಡ್‌ನಲ್ಲಿ ತನ್ನ ಸ್ತಬ್ಧ ಚಿತ್ರ ಪ್ರದರ್ಶಿಸುತ್ತಾ ಬಂದಿರುವ ಕರ್ನಾಟಕವು 15ನೇ ಬಾರಿಗೆ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿತ್ತು. ಆದರೆ, ರಕ್ಷಣಾ ಸಚಿವಾಲಯದ ಉಸ್ತುವಾರಿಯ ಕೇಂದ್ರ ಆಯ್ಕೆ ಸಮಿತಿಯು ಕರುನಾಡಿನ ಸ್ತಬ್ಧ ಚಿತ್ರದ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುವ ಮೂಲಕ ಕನ್ನಡಿಗರಿಗೆ ನಿರಾಸೆ ಮೂಡಿಸಿದೆ.
ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ಗಣರಾಜ್ಯೋತ್ಸವ ಪರೇಡ್‌ಗೆ ಸ್ತಬ್ಧ ಚಿತ್ರ ಕಳುಹಿಸುವ ಜವಾಬ್ದಾರಿ ನಿಭಾಯಿಸುತ್ತಾ ಬಂದಿದೆ. ಇಲಾಖೆ ಈ ಬಾರಿಯೂ ನಿಯಮಾನುಸಾರ ನಾಲ್ಕು ಸ್ತಬ್ಧ ಚಿತ್ರಗಳ ಪರಿಕಲ್ಪನೆಯನ್ನು ಕೇಂದ್ರ ಆಯ್ಕೆ ಸಮಿತಿಗೆ ಕಳುಹಿಸಿತ್ತು. ಬ್ರ್ಯಾಂಡ್ ಬೆಂಗಳೂರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಟರ್ಮಿನಲ್-2 ಮತ್ತು ಬೆಂಗಳೂರಿನ ಅಣ್ಣಮ್ಮದೇವಿ ದೇವಸ್ಥಾನದ ಮಾದರಿಯನ್ನು ಸಮಿತಿಗೆ ಕಳುಹಿಸಲಾಗಿತ್ತು. ಆದರೆ, ಈ ಪೈಕಿ ಯಾವ ಮಾದರಿಯನ್ನೂ ಒಪ್ಪದ ಆಯ್ಕೆ ಸಮಿತಿಯು ರಾಜ್ಯಕ್ಕೆ ಪರೇಡ್‌ನಿಂದಲೇ ಕೊಕ್ ಕೊಟ್ಟಿದೆ.
''ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಕೇಂದ್ರ ಆಯ್ಕೆ ಸಮಿತಿಯ ಅನುಮತಿ ಕೋರಿದ್ದೆವು. ಆದರೆ, ಆಯ್ಕೆ ಸಮಿತಿ ಬೇರೆ ರಾಜ್ಯಗಳ ಸ್ತಬ್ಧ ಚಿತ್ರಗಳಿಗೆ ಅವಕಾಶ ಕಲ್ಪಿಸುವ ಸಬೂಬು ಹೇಳಿ ರಾಜ್ಯಕ್ಕೆ ಅನುಮತಿ ನಿರಾಕರಿಸಿದೆ,'' ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದ ವಿಶಿಷ್ಟ ಸಾಧನೆ
ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕವು ಸತತ 14 ಬಾರಿ ಟ್ಯಾಬ್ಲೊ ಪ್ರದರ್ಶಿಸಿ ವಿಶಿಷ್ಟ ಸಾಧನೆ ಮಾಡಿದೆ. ದೇಶದ ಬೇರೆ ಯಾವುದೇ ರಾಜ್ಯಗಳಿಗೆ ಈ ಅವಕಾಶ ಸಿಕ್ಕಿಲ್ಲ. ಜತೆಗೆ, ರಾಜ್ಯದ ಟ್ಯಾಬ್ಲೊಗಳಿಗೆ ಹಲವು ಬಾರಿ ಪ್ರಶಸ್ತಿ ಬಂದಿವೆ. ತೆಲಂಗಾಣದ ಸ್ತಬ್ಧ ಚಿತ್ರಕ್ಕೂ ಆಯ್ಕೆ ಸಮಿತಿಯು ಈ ಬಾರಿ ಅನುಮತಿ ನಿರಾಕರಿಸಿತ್ತು. ಈ ಸಂಬಂಧ ಕೇಂದ್ರದ ವಿರುದ್ಧ ತೆಲಂಗಾಣದಲ್ಲಿ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಿತಿಯು ಆ ರಾಜ್ಯದ ಟ್ಯಾಬ್ಲೊಗೆ ಅನುಮತಿ ನೀಡಿದೆ.
ಹಿಂದಿನ ವರ್ಷವೂ ಹಗ್ಗಜಗ್ಗಾಟ
ಕಳೆದ ವರ್ಷವೂ ಆರಂಭದಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಕೇಂದ್ರವು ಅನುಮತಿ ನಿರಾಕರಿಸಿತ್ತು. ಈ ವಿಚಾರ ವಿವಾದದ ಸ್ವರೂಪ ಪಡೆದು ಕೇಂದ್ರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಮನವೊಲಿಸಿ ರಾಜ್ಯದ ಟ್ಯಾಬ್ಲೊಗೆ ಅವಕಾಶ ಕೊಡಿಸಿದ್ದರು. ಪರೇಡ್‌ಗೆ 10 ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ'ನಾರಿ ಶಕ್ತಿ' ಪರಿಕಲ್ಪನೆಯ ಸ್ತಬ್ಧ ಚಿತ್ರ ರೂಪಿಸಲಾಗಿತ್ತು.
ರಾಜ್ಯದ ಮಾದರಿ ಮಹಿಳೆಯರಾದ ಸೂಲಗಿತ್ತಿ ನರಸಮ್ಮ, ಹಾಲಕ್ಕಿ ತುಳಸಿಗೌಡ ಮತ್ತು ಸಾಲುಮರದ ತಿಮ್ಮಕ್ಕ ಅವರ ಪ್ರತಿಕೃತಿಗಳನ್ನು ಹೊಂದಿದ ಸ್ತಬ್ಧ ಚಿತ್ರವನ್ನು ಕೇವಲ ಎಂಟು ದಿನದಲ್ಲಿ ಮಾಡಲಾಗಿತ್ತು. ಹೆಚ್ಚಿನ ಕಾಲಾವಕಾಶವಿಲ್ಲದ ಕಾರಣ ಸ್ತಬ್ಧ ಚಿತ್ರದ ಹಲವು ಘಟಕಗಳನ್ನು ಹೊಸದಿಲ್ಲಿಗೆ ಏರ್‌ಲಿಫ್ಟ್ ಮಾಡಲಾಗಿತ್ತು.
Post a Comment