ರಾಜ್ಯ ಸರ್ಕಾರ ಮುಂದಿನ ಒಂದು ವಾರದಲ್ಲಿ 30 ಲಕ್ಷ ರೈತರಿಗೆ ಪರಿಹಾರದ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಹೇಳಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ಒಂದು ವಾರದಲ್ಲಿ 30 ಲಕ್ಷ ರೈತರಿಗೆ ಪರಿಹಾರದ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಹೇಳಿದರು.
ವಿಕಾಸಸೌಧದಲ್ಲಿ ಶುಕ್ರವಾರ ಜರುಗಿದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಚಿವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ರಾಜ್ಯ ಸರ್ಕಾರ 223 ತಾಲ್ಲೂಕುಗಳನ್ನು ಬರಪೀಡಿತ ಮತ್ತು 48.19 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟ ಎಂದು ಘೋಷಿಸಿದ್ದು, ಸೆಪ್ಟೆಂಬರ್ 2023 ರಲ್ಲಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದೆ. ಆದರೆ, ಕೇಂದ್ರ ಸರ್ಕಾರ ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್) ಅಡಿಯಲ್ಲಿ ಶೇ.75 ರಷ್ಟು ರೈತರ ಜಮೀನಿನ ವಿವರಗಳನ್ನು ಅಪ್‌ಲೋಡ್ ಮಾಡಲಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊದಲ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ರೈತರಿಗೆ ಬರ ಹಾಗೂ ಮಳೆಹಾನಿ ಪರಿಹಾರ ತಲುಪಿಸುವ ವಿಚಾರದಲ್ಲಿ ಈ ಹಿಂದೆ ಭಾರೀ ಅವ್ಯವಹಾರಗಳು ನಡೆದಿದ್ದವು. ಜಮೀನು ಯಾರದ್ದೋ ಇದೆ, ಪರಿಹಾರ ಇನ್ಯಾರಿಗೋ ಹೋಗಿರುವ ಹಲವು ಪ್ರಕ್ರರಣಗಳು ನನ್ನ ಗಮನಕ್ಕೆ ಬಂದಿದೆ. ಕಡೂರು ಒಂದೇ ತಾಲೂಕಿನಲ್ಲಿ 6 ಕೋಟಿ ರೂ. ಪರಿಹಾರದ ಹಣ ಅಕ್ರಮ ಎಸಗಲಾಗಿದೆ. ಹಣ ದುರ್ಬಳಕೆಯಾದವರ ಪಟ್ಟಿ ನನ್ನ ಬಳಿ ಇದೆ. ಹಾನಗಲ್, ಶಿಗ್ಗಾಂವ್‌ನಲ್ಲೂ ಇಂತಹ ಪ್ರಕರಣಗಳು ಕಂಡುಬಂದಿದೆ.
ಗರಿಷ್ಠ 5 ಎಕರೆ ವರೆಗೆ ಪರಿಹಾರ ಕೊಡಬಹುದು. ಆದರೆ, 5 ಎಕರೆ ಮೀರಿ ಪರಿಹಾರ ವಿತರಿಸಿದ್ದಾರೆ. ರೈತರಲ್ಲದವರ ಖಾತೆಗೆ 49,999 ಜಮೆ ಆಗಿದೆ. ಅಸಲಿ ರೈತರ ಖಾತೆಗೆ ಅಲ್ಪ ಪ್ರಮಾಣದ ಮೊತ್ತ ಮಾತ್ರ ಜಮೆ ಆಗಿದೆ. ಇದೇ ಕಾರಣಕ್ಕೆ ಈ ಬಾರಿ ರೈತರಿಗೆ ಬರ ಪರಿಹಾರ ನೀಡಲು ಫ್ರೂಟ್ಸ್ ದಾಖಲಾತಿ ಖಡ್ಡಾಯಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಹಿಂದೆ ಫ್ರೂಟ್ಸ್ ಡಾಟಾಬೇಸ್‌ನಲ್ಲಿ 7.7 ಲಕ್ಷ ರೈತರ ಮಾಹಿತಿಯೇ ಇರಲಿಲ್ಲ. ಇದೀಗ ಹೊಸದಾಗಿ ಸೇರಿಸಲಾಗಿದೆ. 34 ಲಕ್ಷ ರೈತರ ಜಮೀನ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದೆ. ಬಿಟ್ಟುಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ 15 ದಿನಗಳಿಂದ ನಮ್ಮ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದು, ರೈತರ ಹಣ ದುರುಪಯೋಗವಾಗದಂತೆ ಅವರಿಗೆ ತಲುಪಿಸಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, 15 ಲಕ್ಷಕ್ಕೂ ಅಧಿಕ ರೈತರಿಗೆ ಈಗಾಗಲೇ ಹಣ ತಲುಪಿಸಲಾಗಿದೆ. ಮುಂದಿನ ವಾರದೊಳಗೆ 30 ಲಕ್ಷ ರೈತರಿಗೆ ಪರಿಹಾರದ ಹಣ ತಲುಪಲಿದೆ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಬರ ಘೋಷಿಸಿ ನಾಲ್ಕು ತಿಂಗಳಾದರೂ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಇನ್ನೂ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 18,177.44 ಕೋಟಿ ರೂ. ಪರಿಹಾರ ನೀಡುವಂತೆ ಸೆಪ್ಟೆಂಬರ್ 22 ರಂದೇ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಭಾರತ ಸರ್ಕಾರದ ಬರ ಅಧ್ಯಯನ ತಂಡ ಅಕ್ಟೋಬರ್ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನೂ ಸಲ್ಲಿಸಿದೆ. ಆದರೂ ಕೇಂದ್ರ ಸರ್ಕಾರ ಈ ವರೆಗೆ ನಮ್ಮ ಮನವಿಯ ಮೇಲೆ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿಲ್ಲ. ಸಭೆ ನಡೆಸುವುದಾಗಿ ಅಮಿತ್ ಶಾ ಹೇಳಿದ್ದರೂ ಉಪಯೋಗವಾಗಿಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ರಾಜ್ಯ ಸರ್ಕಾರವೇ ಮೊದಲ ಕಂತಿನಲ್ಲಿ 2,000 ರೂ. ನೀಡಲು ಮುಂದಾಗಿದೆ ಎಂದು ತಿಳಿಸಿದರು.
3 ತಿಂಗಳಲ್ಲಿ ತಕರಾರು ಪ್ರಕರಣಗಳ ಇತ್ಯರ್ಥ ವೇಗ ಪಡೆದುಕೊಂಡಿದೆ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯ ಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ 59,800 ಪ್ರಕರಣಗಳು ಇದ್ದವು. ಆದರೆ, ಕಳೆದ ಮೂರೇ ತಿಂಗಳಲ್ಲಿ 33,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತಹಸೀಲ್ದಾರ್ ನ್ಯಾಯಾಲಯದಲ್ಲಿ 2215 ಪ್ರಕರಣಗಳಿದ್ದು, ಈ ಸಂಖ್ಯೆಯನ್ನು ಇದೀಗ ಕೇವಲ 170ಕ್ಕೆ ಇಳಿಸಲಾಗಿದೆ. ರೈತರು ತಕರಾರು ಅರ್ಜಿಗಳ ಇತ್ಯರ್ಥಕ್ಕಾಗಿ ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಸಚಿವರು ತಿಳಿಸಿದರು.
Post a Comment