ಕುಕ್ಕರ್ ಬಾಂಬ್ ಎಂದು ಹೇಳಲು ಸರ್ಕಾರಕ್ಕೆ ಭಯವೇ?: ಉಗ್ರರ ಬಗ್ಗೆ ಏಕೆ ಮೃದು ಧೋರಣೆ ಎಂದು ಬಿಜೆಪಿ ತರಾಟೆ

 ಮಂಗಳೂರಿನ ಕಂಕನಾಡಿ ಸಮೀಪ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಈ ಪ್ರಕರಣದ ಪ್ರಮುಖ ಆರೋಪಿ, ಶಂಕಿತ ಉಗ್ರ ಶಾರೀಕ್ ನನ್ನು ಬಂಧಿಸಲಾಗಿದೆ. ಆದರೆ ಇದನ್ನು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಎಂದು ಹೇಳಲು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಭಯ. ಈ ಮೂಲಕ ಶಂಕಿತ ಉಗ್ರರ ಬಗ್ಗೆ ರಾಜ್ಯ ಸರಕಾರ ಮೃದು ಧೋರಣೆ ತಳೆದಿದೆ.

ಕಂಕನಾಡಿ ಗರಡಿ ಸಮೀಪ 2022ರ ನ.19ರಂದು ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಶಾರೀಕ್ ಹಾಗೂ ರಿಕ್ಷಾ ಚಾಲಕ ಗಾಯಗೊಂಡಿದ್ದರು. ಘಟನೆಯ ದಿನ ಇದೊಂದು ಅಚಾನಕ್ ಘಟನೆ ಎಂದು ಬಿಂಬಿತವಾದರೂ ಬಳಿಕ ಇದರ ಹಿಂದಿರುವ ಉಗ್ರ ನೆರಳು ಒಂದೊಂದೇ ಸಾಬೀತಾಯಿತು. ನಗರದ ಕದ್ರಿ ದೇವಸ್ಥಾನವನ್ನೇ ಉಗ್ರ ಟಾರ್ಗೆಟ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿತ್ತು.

ಬಾಂಬ್ ಸ್ಫೋಟ ಪ್ರಕರಣದ ಗಂಭೀರತೆ ಅರಿತ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಪ್ರಕರಣವನ್ನು 2022ರ ನ.24ರಂದು ಎನ್‌ಐಎಗೆ ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಎನ್‌ಐಎಗೆ ತನಿಖೆ ವಹಿಸುವಂತೆ ಆದೇಶ ಮಾಡಿದ್ದು, ಎನ್‌ಐಎ ತಂಡ ನಗರಕ್ಕೆ ಆಗಮಿಸಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.

ಉಗ್ರರ ಬಗ್ಗೆ ಮೃದು ಧೋರಣೆ


ಘಟನೆಯ ದಿನದಿಂ ದಲೂ ಕುಕ್ಕರ್ ಬಾಂಬ್ ಸ್ಫೋಟ ಘಟನೆಯನ್ನು ರಾಜ್ಯ ಕಾಂಗ್ರೆಸ್ ಲಘುವಾಗಿ ಪರಿಗಣಿಸಿತ್ತು. ಬಾಂಬ್ ಸ್ಫೋಟ ಸಂದರ್ಭ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಘಟನೆಯನ್ನು ಖಂಡಿಸುವ ಬದಲು, 'ಕುಕ್ಕರ್ ಬಾಂಬ್ ಸ್ಫೋಟ ಗಂಭೀರ ವಿಚಾರವಲ್ಲ' ಎಂದು ಹೇಳಿಕೆ ನೀಡಿತ್ತು. ಇದು ಆಡಳಿತ - ಪ್ರತಿಪಕ್ಷಗಳ ವಾಗ್ವಾದಕ್ಕೆ ಕಾರಣವಾಗಿತ್ತು.

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡ ಬಳಿಕ ಸಾಲು ಸಾಲು ಆರೋಪಿಗಳು ಬಲೆಗೆ ಬಿದ್ದಿರುವುದು ಈ ಸ್ಫೋಟದ ಗಂಭೀರತೆಗೆ ಸಾಕ್ಷಿಯಾಗಿದೆ. ಕದ್ರಿ ದೇವಸ್ಥಾನ ಸಹಿತ ಹಲವು ಕಡೆಗಳಲ್ಲಿ ವಿಧ್ವಂಸಕ ಕೃತ್ಯಗ ಳಿಗೆ ಸಂಚು ನಡೆಸಿರುವುದು ತನಿಖೆಯಿಂದ ಬಹಿರಂಗಗೊಂಡಿತ್ತು.


ಆಡಳಿತದಲ್ಲೂ ಬೇಜವಾಬ್ದಾರಿ ಆದೇಶ


ಬಾಂಬ್ ಸ್ಫೋಟ ಸಂದರ್ಭ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಸರಕಾರ ಈ ರಾಜ್ಯದಲ್ಲಿ ಆಡಳಿತಕ್ಕೆ ಬಂದಿದ್ದು, ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡ ರಿಕ್ಷಾ ಚಾಲಕನಿಗೆ ನೀಡಿದ ಪರಿಹಾರದಲ್ಲೂ ಉಗ್ರರ ಬಗೆಗಿನ ಮೃದು ಧೋರಣೆಯನ್ನು ಮತ್ತೆ ವ್ಯಕ್ತಪಡಿಸಿದೆ.

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗಾಯಾಳು ರಿಕ್ಷಾ ಚಾಲಕ ಗೋರಿಗುಡ್ಡ ಪುರುಷೋತ್ತಮ ಅವರ ಜೀವನ ನಿರ್ವಹಣೆಗೆ 2 ಲಕ್ಷ ರೂ. ಆರ್ಥಿಕ ಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗಿದೆ. ಈ ಆದೇಶದಲ್ಲಿ 'ಆಟೋದಲ್ಲಿ ಪ್ರಯಾಣಿಕರೊಬ್ಬರು ಹಿಡಿದುಕೊಂಡಿದ್ದ ಕುಕ್ಕರ್ ಸಿಡಿದು, ಆಟೋ ರಿಕ್ಷಾ ನಜ್ಜುಗುಜ್ಜಾಗಿದೆ' ಎಂದು ಉಲ್ಲೇಖಿಸಲಾಗಿದೆ.

ಗೋಡೆ ಬರಹ, ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರನ ಬಗ್ಗೆ ಇರುವ ಮೃದು ಧೋರಣೆ ಹಾಗೂ ಕುಕ್ಕರ್ ಬಾಂಬ್ ಎಂದು ಹೇಳದಿರುವುದು ಕಾಂಗ್ರೆಸ್ ಸರಕಾರದ ನಡೆಯನ್ನು ಅನುಮಾನಿಸುವಂತಿದೆ. ಈ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ಈ ಧೋರಣೆ ವಿರುದ್ಧ ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ನಳನ್ ಕುಮಾರ್ ಕಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡ ರಿಕ್ಷಾ ಚಾಲಕರಿಗೆ ರಾಜ್ಯ ಸರಕಾರ ನೀಡಿದ ಪರಿಹಾರ ಆದೇಶದಲ್ಲಿ 'ಆಟೋದಲ್ಲಿ ಪ್ರಯಾಣಿಕರೊಬ್ಬರು ಹಿಡಿದುಕೊಂಡಿದ್ದ ಕುಕ್ಕರ್ ಸಿಡಿದು, ಆಟೋರಿಕ್ಷಾ ನಜ್ಜುಗುಜ್ಜಾಗಿದೆ' ಎಂದು ಹೇಳಿರುವುದು ರಾಜ್ಯದಲ್ಲಿ ಆಡಳಿತ ನಡೆಸುವವರ ಮನಸ್ಥಿತಿಯನ್ನು ವ್ಯಕ್ತಪಡಿಸುತ್ತದೆ.

ಘಟನೆ ನಡೆದಾಗಲೂ ಕಾಂಗ್ರೆಸ್‌ನ ಮುಖಂಡರು ಇದು ಗಂಭೀರವಾದ ವಿಷಯವಲ್ಲ ಎಂಬಂತೆ ಹೇಳಿಕೆ ನೀಡಿದ್ದರು. ಇದೀಗ ಅವರ ನೈಜ ಮುಖವಾಡ ಬಯಲಾಗಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕುದಾದ ಬೆಲೆ ತೆರಲಿದ್ದಾರೆ. ರಾಜ್ಯದ ಜನತೆ ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Post a Comment

Previous Post Next Post