ಚೆಕ್ ಮೂಲಕ ಲಂಚ ಪಡೆದು, ಸಹಿ ಮಾಡಿ ಅಪ್ಪನನ್ನು ಜೈಲಿಗೆ ಕಳುಹಿಸುವ ಕೆಲಸ ನಾನು ಮಾಡಿಲ್ಲ ಎಂದು ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಕಿಡಿ ಕಾರಿದ್ದಾರೆ.
ಮಧು ಬಂಗಾರಪ್ಪ
ಶಿವಮೊಗ್ಗ: ಚೆಕ್ ಮೂಲಕ ಲಂಚ ಪಡೆದು, ಸಹಿ ಮಾಡಿ ಅಪ್ಪನನ್ನು ಜೈಲಿಗೆ ಕಳುಹಿಸುವ ಕೆಲಸ ನಾನು ಮಾಡಿಲ್ಲ ಎಂದು ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಕಿಡಿ ಕಾರಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿನ ಭ್ರಷ್ಟಾಚಾರದ ಬಗ್ಗೆ ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದಾರೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಹೆಸರು ಕೇಳಿ ಬಂದಿದೆ. ಹಾಗಿದ್ದರೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನನ್ನ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ, ದಮ್ಮು, ತಾಕತ್ತು ಇದ್ದರೆ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪಗಳಿಗೆ ವಿಜಯೇಂದ್ರ ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.
ಕೋವಿಡ್ ವೇಳೆ ಸತ್ತವರ ಹೆಸರಲ್ಲಿ 40 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿರುವ ಬಿಜೆಪಿಯವರಿಗೆ ಚೆಕ್ ಬೌನ್ಸ್ ನೆಪದಲ್ಲಿ ನನ್ನ ರಾಜೀನಾಮೆ ಕೇಳುವ ನೈತಿಕತೆ ಇದೆಯೇ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.
ನಮ್ಮ ತಂದೆಯ (ಎಸ್.ಬಂಗಾರಪ್ಪ) ವಿರುದ್ಧ ಸಿಬಿಐ ಭ್ರಷ್ಟಾಚಾರದ ಹೆಸರಲ್ಲಿ ಪ್ರಕರಣ ದಾಖಲಿಸಿದಾಗ ಅದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಾರದೇ ವಿಚಾರಣೆ ಎದುರಿಸಿ ಕ್ಲೀನ್ ಚಿಟ್ ಪಡೆದಿದ್ದರು ಎಂದು ಸ್ಮರಿಸಿದ ಮಧು ಬಂಗಾರಪ್ಪ, ಚೆಕ್ ಬೌನ್ಸ್ ವಿಚಾರವೂ ಖಾಸಗಿ ಸಂಗತಿ. ಅಪ್ಪ (ಬಂಗಾರಪ್ಪ) ಬದುಕಿದ್ದಾಗಲೇ ಈ ವಹಿವಾಟು ನಡೆದಿತ್ತು. ಈಗ ನ್ಯಾಯಾಲಯದ ಮೂಲಕ ಪರಿಹರಿಸಿಕೊಂಡಿದ್ದೇವೆಎಂದರು.
ಗ್ರಾಮ ಪಂಚಾಯ್ತಿ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲದ ಎನ್.ರವಿಕುಮಾರ್ ನನ್ನ ರಾಜೀನಾಮೆ ಕೇಳುತ್ತಾರೆ ಎಂದು ವ್ಯಂಗ್ಯವಾಡಿದ ಮಧು, ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಂಗಾರಪ್ಪ ಬಡಾವಣೆ ಹೆಸರಲ್ಲಿ ಭೂ ಹಗರಣ ನಡೆಸಿರುವ ಆರ್.ಅಶೋಕ್ ನನ್ನ ವಿರುದ್ಧ ಮಾತಾಡುತ್ತಿದ್ದಾರೆ. ಸಮಯ ಬಂದಾಗ ಅಲ್ಲಿ ನಡೆದಿರುವ ಎಲ್ಲ ಅವ್ಯವಹಾರದ ಸಂಗತಿಗಳನ್ನು ಜನರ ಮುಂದಿಡಲಾಗುವುದು ಎಂದರು.
Post a Comment