ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಘನಘೋರ ದುರಂತವೊಂದು ನಡೆದು ಹೋಗಿದ್ದು, ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಅವರ ಪಕ್ಕಾ ಅಭಿಮಾನಿಗಳಾದ ಗ್ರಾಮದ ಯುವಕರು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಮಧ್ಯರಾತ್ರಿಯಿಂದಲೇ ಭರ್ಜರಿ ಸಿದ್ದತೆ ನಡೆಸುತ್ತಿದ್ದರು.
ಮೃತ ಯುವಕರುಸೂರಣಗಿ(ಗದಗ): ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಘನಘೋರ ದುರಂತವೊಂದು ನಡೆದು ಹೋಗಿದ್ದು, ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಅವರ ಪಕ್ಕಾ ಅಭಿಮಾನಿಗಳಾದ ಗ್ರಾಮದ ಯುವಕರು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಮಧ್ಯರಾತ್ರಿಯಿಂದಲೇ ಭರ್ಜರಿ ಸಿದ್ದತೆ ನಡೆಸುತ್ತಿದ್ದರು.
ತಡರಾತ್ರಿ ನಟ ಯಶ್ನ ಹುಟ್ಟುಹಬ್ಬದ ಬ್ಯಾನರ್ ಕಟ್ಟಲು ಹೋಗಿ 19ರಿಂದ 22 ವರ್ಷದೊಳಗಿನ ಯುವಕರು ವಿದ್ಯುತ್ ಪ್ರವಹಿಸಿ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಮಕ್ಕಳನ್ನು, ಕುಟುಂಬದವರನ್ನು ಕಳೆದುಕೊಂಡ ಕುಟುಂಬಸ್ಥರು, ಸಮೀಪದ ಬಂಧುಗಳ ಆಕ್ರಂದನ ಗ್ರಾಮದಲ್ಲಿ ಮುಗಿಲುಮುಟ್ಟಿದೆ.ಸಾವಗೀಡಾದ ಯುವಕರ ಸಾಮೂಹಿಕ ಅಂತ್ಯಕ್ರಿಯೆ ನಡೆಯುತ್ತಿದ್ದು ಇದರ ಮಧ್ಯೆ ಕುಟುಂಬಸ್ಥರ ಆಕ್ರಂದನ, ದುಃಖ ಹೇಳತೀರದಾಗಿದೆ.
ಹನಮಂತ ಮಜ್ಜುರಪ್ಪ ಹರಿಜನ (21), ಮುರಳಿ ನೀಲಪ್ಪ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಮೃತ ಯುವಕರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬ ಮೂವರು ಯುವಕರಿಗೆ ಗಂಭೀರ ಗಾಯಗಳಾಗಿವೆ.
ಆಸ್ಪತ್ರೆಗೆ ಶಾಸಕ ಚಂದ್ರು ಲಮಾಣಿ ಭೇಟಿ: ದುರಂತ ಸಂಭವಿಸಿ ಆಸ್ಪತ್ರೆ ಸೇರಿರುವ ಗಾಯಾಳುಗಳನ್ನು ಮಾತನಾಡಿಸಲು ಶಾಸಕ ಚಂದ್ರು ಲಮಾಣಿ ಅವರು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಹಾಗೂ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ: ಈ ಘಟನೆ ಸಂಬಂಧ ಗದಗಕ್ಕೆ ಹೋದಾಗ ಕುಟುಂಬಸ್ಥರ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಘಟನೆ ಸಂಬಂಧ ಜಿಲ್ಲಾಧಿಕಾರಿ, ಎಸ್ಪಿಯಿಂದಲೇ ಮಾಹಿತಿ ಪಡೆದುಕೊಂಡಿದ್ದೇನೆ. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದರು.
ಲಕ್ಷ್ಮೇಶ್ವರ ಆಸ್ಪತ್ರೆಗೆ ಗದಗ ಎಸ್ಪಿ ಬಿ.ಎಸ್.ನೇಮಗೌಡ ಭೇಟಿ ನೀಡಿ ಗಂಭೀರ ಗಾಯಗೊಂಡ ಮೂವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಒಂಬತ್ತು ಜನ ಕಟೌಟ್ ಕಟ್ಟುವಾಗ ಘಟನೆ ನಡೆದಿದೆ. ಎಲ್ಲರೂ ಯಶ್ ಅಭಿಮಾನಿಗಳು. ಕಬ್ಬಿಣದ ಫ್ರೇಮ್ ಇರೋದರಿಂದ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ದುರಂತ ನಡೆದಿದೆ. ಮೂವರು ಯುವಕರು ಮೃತಪಟ್ಟಿದ್ದಾರೆ. ಮೂವರಿಗೆ ಗಾಯವಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದರು.
ಯಶ್ ಬಂದು ಸಾಂತ್ವನ ಹೇಳಬೇಕು: ಸೂರಣಗಿ ಗ್ರಾಮಕ್ಕೆ ನಟ ಯಶ್ ಬರಬೇಕೆಂದು ಎಂಬ ಆಗ್ರಹ ಕೇಳಿ ಬಂದಿದೆ. ‘ಯಶ್ ನಮ್ಮೂರಿಗೆ ಬರಬೇಕು. ಬಂದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು’ ಎಂದು ಮೃತ ಯುವಕರ ಗೆಳೆಯ ಪ್ರಕಾಶ ಮ್ಯಾಗೇರಿ ಆಗ್ರಹಿಸಿದ್ದಾರೆ. ಆಸ್ಪತ್ರೆಗೆ ಶಾಸಕ ಚಂದ್ರು ಲಮಾಣಿ ಭೇಟಿ ನೀಡಿ ಗಾಯಾಳುಗಳ ಜೊತೆ ಮಾತನಾಡಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದ್ದಾರೆ.
ಸರ್ಕಾರ ನಿಯಮ ಹೊರಡಿಸಬೇಕು: ತಮ್ಮ ನೆಚ್ಚಿನ ನಟರು, ರಾಜಕಾರಣಿಗಳ ಹುಟ್ಟುಹಬ್ಬದ ದಿನ ಬ್ಯಾನರ್, ಪೋಸ್ಟರ್ ಕಟ್ಟುವಾಗ ಇಷ್ಟು ಎತ್ತರದಲ್ಲಿಯೇ ಕಟ್ಟಬೇಕು, ಹೀಗೆಯೇ ಇರಬೇಕೆಂದು ಸರ್ಕಾರ ನಿಯಮ ಹೊರಡಿಸಬೇಕು. ತಮ್ಮ ನೆಚ್ಚಿನ ನಟರ ಮೇಲಿನ ಅಭಿಮಾನದಿಂದ ಈ ರೀತಿ ಮಾಡಿ ಪ್ರಾಣ ಕಳೆದುಕೊಂಡರೆ ಕುಟುಂಬದವರ ಕಥೆಯೇನು,ಈ ಬಗ್ಗೆ ನಟರೂ ಕೂಡ ತಮ್ಮ ಅಭಿಮಾನಿಗಳಲ್ಲಿ ಜಾಗೃತಿ, ಅರಿವು ಮೂಡಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ.
Post a Comment