ಅಯೋಧ್ಯಾ ರಾಮಮಂದಿರ ಉದ್ಘಾಟನೆ: ಪದವಿ ಮರೆತು ರಾಮಭಕ್ತರಾಗಿ ಬರಲು ಪ್ರಧಾನಿ ಮೋದಿ ಮನವಿ

 ಹೊಸದಿಲ್ಲಿ: ''ಜ. 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪದವಿ, ಸ್ಥಾನಮಾನ ಎಲ್ಲ ಮರೆತು ರಾಮಭಕ್ತರಾಗಿ ಭಾಗವಹಿಸಿ,'' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಹೋದ್ಯೋಗಿಗಳಿಗೆ ಮನವಿ ಮಾಡಿದ್ದಾರೆ.


''ರಾಮ ಮಂದಿರ ಉದ್ಘಾಟನೆಯು ವಿಶ್ವದ ಮಹೋನ್ನತ ಕಾರ್ಯಕ್ರಮವಾಗಿದೆ. ಹೀಗಾಗಿ ರಾಮ ಭಕ್ತರೊಂದಿಗೆ ರಾಮ ಭಕ್ತರಾಗಿ ಆಗಮಿಸಿ. ಅನ್ನದಾಸೋಹ ನಡೆಸಿ,'' ಎಂದು ಪ್ರಧಾನಿ ಅವರು ಕೇಂದ್ರ ಸಚಿವರುಗಳಿಗೆ ಸಲಹೆ ನೀಡಿದ್ದಾರೆ. ಗುರುವಾರ ಪ್ರಧಾನಿ ನಿವಾಸದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ.

''ಅಂದು ಮನೆಗಳಲ್ಲಿ ಮಣ್ಣಿನ ದೀಪಗಳನ್ನು ಹಚ್ಚಿ, ದೀಪಾವಳಿಯಂತೆ ಆಚರಿಸಬೇಕು. ಅಂದು ನಿಮ್ಮ ಕ್ಷೇತ್ರಗಳಲ್ಲಿ ಬಡವರಿಗೆ ಅನ್ನದಾಸೋಹ ಮಾಡಿ. ಜತೆಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿದ ಬಳಿಕ ನಿಮ್ಮ ಕ್ಷೇತ್ರದ ಜನರನ್ನು ಅಯೋಧ್ಯೆಗೆ ಕಳುಹಿಸಲು ರೈಲು ವ್ಯವಸ್ಥೆ ಮಾಡಿ,'' ಎಂದೂ ಸೂಚಿಸಿದರು.

ಮುಖ್ಯಮಂತ್ರಿಗಳಿಗೆ ಸೂಚನೆ

ದೇಶದ 12 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ನಾಲ್ಕು ರಾಜ್ಯಗಳಲ್ಲಿ ಮೈತ್ರಿಕೂಟದ ಸರಕಾರವಿದೆ. ಪಕ್ಷದ ಮುಖ್ಯಮಂತ್ರಿಗಳು ಗಣರಾಜ್ಯೋತ್ಸವದ ನಂತರ ಸಂಪುಟ ಸಹೋದ್ಯೋಗಿಗಳ ಜತೆ ರಾಮ ಮಂದಿರಕ್ಕೆ ಭೇಟಿ ನೀಡಬೇಕು. ಒಮ್ಮೆಲೆ ಎರಡು ರಾಜ್ಯಗಳ ಸಿಎಂ ಮತ್ತು ಅವರ ಸಂಪುಟ ಅಯೋಧ್ಯೆಗೆ ಆಗಮಿಸದಂತೆ ಎಚ್ಚರವಹಿಸಬೇಕು. ಈ ಕುರಿತು ಮೊದಲೇ ಅಯೋಧ್ಯೆ ಪ್ರವಾಸದ ಯೋಜನೆಯನ್ನು ಉತ್ತರಪ್ರದೇಶ ಸರಕಾರಕ್ಕೆ ತಿಳಿಸಬೇಕು. ರಾಮ ಮಂದಿರಕ್ಕೆ ಬಂದ ನಂತರ ಭಕ್ತರ ಜೊತೆ ಬೆರೆಯಬೇಕು,'' ಎಂದು ಪ್ರಧಾನಿ ಅವರು ಬಿಜೆಪಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

ಈಗಾಗಲೇ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್‌ ಬನ್ಸಾಲ್‌, ವಿನೋದ್‌ ತಾವ್ಡೆ ಮತ್ತು ತರುಣ್‌ ಚುಗ್‌ ಎರಡು ವಾರಗಳಿಂದ ಅಯೋಧ್ಯೆಯಲ್ಲಿ ವಾಸ್ತವ್ಯ ಹೂಡಿದ್ದು, ಪಕ್ಷದ ನಾಯಕರ ಪ್ರವಾಸದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

ಅಂಚೆಚೀಟಿ ಬಿಡುಗಡೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಯೋಧ್ಯೆಯ ರಾಮ ಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಮತ್ತು ವಿಶ್ವದಾದ್ಯಂತ ಭಗವಾನ್‌ ರಾಮನಿಗೆ ಸಮರ್ಪಿತವಾದ ಅಂಚೆ ಚೀಟಿಗಳನ್ನು ಹೊಂದಿರುವ ಪುಸ್ತಕವನ್ನು ಬಿಡುಗಡೆ ಮಾಡಿದರು.

''ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾನ ಅಭಿಯಾನ ಆಯೋಜಿಸಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತು. ಶ್ರೀರಾಮ ಮಂದಿರದ 6 ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ಜಗತ್ತಿನೆಲ್ಲೆಡೆ ರಾಮನ ಬಗ್ಗೆ ಬಿಡುಗಡೆ ಮಾಡಿದ ಅಂಚೆಚೀಟಿಗಳ ಆಲ್ಬಂ ಬಿಡುಗಡೆಯಾಗಿದೆ. ನಾನು ಎಲ್ಲ ರಾಮಭಕ್ತರನ್ನು ಅಭಿನಂದಿಸುವೆ,'' ಎಂದು ಪ್ರಧಾನಿ ಹೇಳಿದರು.

48 ಪುಟಗಳ ಅಂತಾರಾಷ್ಟ್ರೀಯ ಕೃತಿಯಲ್ಲಿಅಮೆರಿಕ, ನ್ಯೂಜಿಲೆಂಡ್‌, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಸೇರಿದಂತೆ 20 ದೇಶಗಳು ಹಾಗೂ ವಿಶ್ವಸಂಸ್ಥೆ ಹೊರ ತಂದಿರುವ ಅಂಚೆಚೀಟಿಗಳನ್ನು ಒಳಗೊಂಡಿದೆ. ಭಾರತ ಹೊರ ತಂದಿರುವ ಅಂಚೆ ಚೀಟಿಗಳಲ್ಲಿ ರಾಮ ಮಂದಿರ, ಗಣೇಶ, ಹನುಮಾನ್‌, ಜಟಾಯು, ಕೇವತ ರಾಜ ಮತ್ತು ಶಬರಿಯ ಚಿತ್ರಗಳಿವೆ.

Post a Comment

Previous Post Next Post