ಅಯೋಧ್ಯೆಯ ರಾಮ ಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಪ್ರತಿಮೆ ಪ್ರತಿಷ್ಠಾಪನೆಗೆ ಆಯ್ಕೆ!

 ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್  ಕೆತ್ತನೆಯ  ಶ್ರೀರಾಮನ ಪ್ರತಿಮೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.

                                          ಶ್ರೀರಾಮನ ಪ್ರತಿಮೆಯೊಂದಿಗೆ ಅರುಣ್ ಯೋಗಿರಾಜ್

Posted By : Rekha.M
Source : Online Desk

ಬೆಂಗಳೂರು: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್  ಕೆತ್ತನೆಯ ಶ್ರೀರಾಮನ ಪ್ರತಿಮೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ. ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಮೆ ಜೊತೆಗೆ ಶಿಲ್ಪಿ ಯೋಗಿರಾಜ್ ಅರುಣ್ ಅವರ ಫೋಟೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ ಮತ್ತಿತರರು ಹಂಚಿಕೊಂಡಿದ್ದಾರೆ. 

“ಶ್ರೀರಾಮ-ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ, ಇದೀಗ ರಾಮನೂರಿನ ಗುಡಿಯನು ಮೈಸೂರಿನ ಬಾಲರಾಮನು ಬೆಳಗುವನು. ಮೈಸೂರಿನ ಅಪ್ರತಿಮ ಶಿಲ್ಪ ಕಲಾ ಪ್ರತಿಭೆ ಅರುಣ್ ಯೋಗಿರಾಜ್ ಅವರ ಭಕ್ತಿ ಕೌಶಲ್ಯದ ಕೆತ್ತನೆಯಿಂದ ಪಡಿಮೂಡಿದ ರಾಮಲಲಾ ಮೂರ್ತಿಯು ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿರುವುದು ಮೈಸೂರಿನ ಹಿರಿಮೆ, ಕರುನಾಡ ಹೆಮ್ಮೆಯಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ರಾಮನ ಭಂಟ ಹನುಮಂತನು ಹುಟ್ಟಿರುವ ನಮ್ಮ ಕನ್ನಡನಾಡಿನಲ್ಲಿ, ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಶ್ರೀರಾಮನ ವಿಗ್ರಹವೂ ಕರ್ನಾಟಕದ ಶಿಲ್ಪಿಯಿಂದಲೇ ಕೆತ್ತನೆಯಾಗಿರುವುದು ಭಾವನಾತ್ಮಕ ಭಕ್ತಿ ತರಿಸಿದೆ. ಅಂತರಾಷ್ಟ್ರೀಯ ಗಮನ ಸೆಳೆದ ಕೇದಾರನಾಥದ ಆದಿ ಶಂಕರಚಾರ್ಯ, ದೆಹಲಿಯ ಇಂಡಿಯಾ ಗೇಟ್ ಬಳಿಯ ಸುಭಾಷ್ ಚಂದ್ರ ಬೋಸ್, ಇದೀಗ ವಿಶ್ವ ಹಿಂದೂಗಳ ಹೃದಯದಲ್ಲಿ ನೆಲೆಸಲಿರುವ ಅಯೋಧ್ಯೆಯ ಬಾಲ ರಾಮನ ಮೂರ್ತಿಯ ವಿಗ್ರಹ ರೂಪಿಸಿ, ರಾಜ್ಯಕ್ಕೆ ಶ್ರೇಷ್ಠ ಕೀರ್ತಿ ತಂದ ಶಿಲ್ಪಿ ಯೋಗಿರಾಜ್ ಹಾಗೂ ಈ ಕಾರ್ಯದಲ್ಲಿ ಹೆಗಲುಕೊಟ್ಟ ಅವರ ತಂಡದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಮೈಸೂರು ಮೂಲದ ಪ್ರಖ್ಯಾತ ಶಿಲ್ಪಿ ಅರುಣ್ ಆಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ರಾಮಮಂದಿರದ ವಿಗ್ರಹದ ಕೆತ್ತನೆಯನ್ನು ನೆರವೇರಿಸಿರುವುದು  ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. 



Post a Comment

Previous Post Next Post