ಸಿದ್ದೇಶ್ವರ ದೇವಸ್ಥಾನದ ಜಾತ್ರೆ; ವಿವಾದ ಹುಟ್ಟು ಹಾಕಿದ ʼಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶʼವೆಂಬ ಬ್ಯಾನರ್‌!

 ರಾಜ್ಯದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಹಿಂದುಯೇತರ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

                                                 ದೇವಾಲಯದಲ್ಲಿ ಬ್ಯಾನರ್ ಹಾಕಿರುವುದು.

Posted By : Rekha.M
Source :Online Desk

ವಿಜಯಪುರ: ರಾಜ್ಯದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಹಿಂದುಯೇತರ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ಸಂಕ್ರಾಂತಿ ಹಬ್ಬದ ವೇಳೆ ನಡೆಯುವ ವಿಜಯಪುರ ಜಿಲ್ಲೆಯ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಹಿಂದುಯೇತರ ವ್ಯಾಪಾರಿಗಳಿಗೆ ಅವಕಾಶ ನೀಡುವುದಿಲ್ಲ. ಕೇವಲ ಹಿಂದು ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುವುದೆಂಬ ಬ್ಯಾನರ್ ವೊಂದು ವಿವಾದ ಹುಟ್ಟುಹಾಕಿದೆ.

ವಿಜಯಪುರದ ಸಿದ್ದೇಶ್ವರ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಇತ್ತೀಚೆಗಷ್ಟೇ ಶ್ರೀರಾಮ ಸೇನೆಯ ಸದಸ್ಯರು ದೇವಾಲಯದ ಸಮಿತಿ ಮುಂದೆ ಮನವಿ ಸಲ್ಲಿಸಿದ್ದರು.

ಇದರ ಬೆನ್ನಲ್ಲೇ ದೇವಾಲಯದ ಹೊರಗೆ ಮುಸ್ಲಿಮರು ದೇಶದ ಕಾನೂನನ್ನು ನಂಬುವುದಿಲ್ಲ. ಅವರು ಪವಿತ್ರ ಗೋವುಗಳ ಹಂತಕರಾಗಿದ್ದಾರೆ. ಜಿಹಾದ್ ಹೆಸರಿನಲ್ಲಿ ಧಾರ್ಮಿಕ ಮತಾಂತರದಲ್ಲಿ ತೊಡಗಿ ಭಾರತೀಯ ಸಂಸ್ಕೃತಿಗೆ ಅವಮಾನ ಮಾಡುತ್ತಿದ್ದಾರೆ. ಅಂತಹವರಿಗೆ ಸಿದ್ದೇಶ್ವರ ಜಾತ್ರೆಯಲ್ಲಿ ಯಾವುದೇ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಬ್ಯಾನರ್ ಕಂಡು ಬಂದಿದೆ.

ಜ.12 ರಿಂದ 16 ರ ವರೆಗೆ ವರೆಗೆ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆ ಶ್ರೀಸಿದ್ಧೇಶ್ವರ ಸಂಸ್ಥೆಯ ಸಿಬ್ಬಂದಿ ಸಿದ್ದೇಶ್ವರ ದೇವಸ್ಥಾನದ ಎದುರು ಈ ಬ್ಯಾನರ್ ನ್ನು ಕಟ್ಟಲಾಗಿದೆ.

ಇದನ್ನು ಗಮನಿಸಿದ ದೇವಸ್ಥಾನದ ಆಡಳಿತ ಮಂಡಳಿಯು ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ದೇವಸ್ಥಾನದ ಸಿಬ್ಬಂದಿ ಹಾಗೂ ಶ್ರೀರಾಮ ಸೇನೆಯ ಸದಸ್ಯರ ನಡುವೆ ಜಟಾಪಟಿ ಶುರುವಾಗಿದೆ.

ಸೇನೆಯ ಸ್ಥಳೀಯ ಅಧ್ಯಕ್ಷ ನೀಲಕಂಠ ಕಂದಗಲ್ ಅವರು ಮಾತನಾಡಿ, ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಹಿಂದೂ ಸಂಘಟನೆಗಳ ಒಕ್ಕೂಟದಿಂದ ಬ್ಯಾನರ್ ಹಾಕಲಾಗಿದೆ. “ದೇವಾಲಯವು ಸಮಿತಿಗೆ ಮಾತ್ರವಲ್ಲ, ಎಲ್ಲಾ ಹಿಂದೂಗಳಿಗೆ ಸೇರಿದ್ದಾಗಿದೆ. ಇದೀಗ ಸಮಿತಿ ನಮ್ಮ ಬೇಡಿಕೆಯನ್ನು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಟೀಕಿಸಿದ ಅವರು, ಯತ್ನಾಳ್ ಒಂದೆಡೆ ತಮ್ಮನ್ನು ಹಿಂದೂ ಐಕಾನ್ ಎಂದು ಕರೆದುಕೊಂಡು ಹಿಂದೂ ಧರ್ಮಕ್ಕಾಗಿ ಹೋರಾಡುತ್ತಾರೆ. ಮತ್ತೊಂದೆಡೆ, ನಮ್ಮ ಬೇಡಿಕೆಗಳಿಗೆ ಸ್ಪಂದಿವುದಿಲ್ಲ. ಯತ್ನಾಳ್ ದ್ವಂದ್ವ ನಿಲುವು ತಾಳುತ್ತಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ದೇವಾಲಯ ಬ್ಯಾನರ್ ತೆಗೆದಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಬ್ಯಾನರ್ ಹಾಕಿದ್ದೇವೆ. ಒಂದು ವೇಳೆ ಸಮಿತಿಯು ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ, ನಮ್ಮ ಸದಸ್ಯರು ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸಮಿತಿಯ ವಿರುದ್ಧ ಆಂದೋಲನವನ್ನು ಪ್ರಾರಂಭಿಸುತ್ತದೆ ಎಂದು ಎಚ್ಚರಿಸಿದ್ದಾರೆ.


Post a Comment

Previous Post Next Post