ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಲವಾರು ಭಾಗಿ. ಶಿವಮೊಗ್ಗದ ಫ್ರೀಡಂ ಪಾಕ್೯ನಲ್ಲಿ ನಡೆಯುವ ಕಾರ್ಯಕ್ರಮ. 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳ ಭಾಗಿ. ಕಾರ್ಯಕ್ರಮದ ಯಶಸ್ಸಿಗೆ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವಿರತ ಪ್ರಯತ್ನ.
ಬೆಂಗಳೂರು, ಜ,11- ರಾಜ್ಯ ಸರ್ಕಾರದ ಮಹತ್ಷಕಾಂಕ್ಷೆಯ ೫ನೇ ಗ್ಯಾರಂಟಿ ಘೋಷಣೆ ʼಯುವ ನಿಧಿʼ ಯೋಜನೆಯಡಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರ ಸಜ್ಜಾಗಿದೆ.
ಯುವಜನರ ಆಶಾಕಿರಣವಾದ ಸ್ವಾಮಿ ವಿವೇಕಾನಂದ ಜನ್ಮ ದಿನವಾದ ಶುಕ್ರವಾರ( ಜ. 12 ) ನಡೆಯುವ ಈ ಐತಿಹಾಸಿಕ ಸಮಾರಂಭಕ್ಕೆ ಶಿವಮೊಗ್ಗ ನಗರದ ಹೃದಯ ಭಾಗವೇ ಆದ ಫ್ರೀಡಂ ಪಾರ್ಕ್( ಹಳೆ ಜೈಲ್ ಆವರಣ) ನ ವಿಶಾಲವಾದ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. ೮೫ ಸಾವಿರಕ್ಕೂ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ ನೀಡುವ ಸರ್ಕಾರದ ಮಹತ್ವಾಕಾಂಕ್ಷಿಯ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಮಧುಬಂಗಾರಪ್ಪ, ಡಾ.ಶರಣ ಪ್ರಕಾಶ್ ಪಾಟೀಲ್, ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಹಲವು ಸಚಿವರು, ಗಣ್ಯರು, ಶಾಸಕರು ಅಧಿಕಾರಿಗಳು ಚಾಲನೆ ಕೊಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಶಿವಮೊಗ್ಗ ,ದಾವಣಗೆರೆ, ಚಿತ್ರದುರ್ಗಾ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಹಾಗೂ ಅಷ್ಟೆ ಸಂಖ್ಯೆಯ ಜನರು ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿರುವ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಸಚಿವ ಹಾಗೂ ಕಾರ್ಯಕ್ರಮದ ರೂವಾರಿಗಳಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು, ಕಾರ್ಯಕ್ರಮಕ್ಕೆ , ಬರುವವರಿಗಾಗಿ ವೇದಿಕೆಯ ಸಿದ್ಧತೆ, ಆಸನ ವ್ಯವಸ್ಥೆ, ವಾಹನ ನಿಲುಗಡೆ, ಊಟೋಪಹಾರ ಹಾಗೂ ಮೂಲಭೂತ ವ್ಯವಸ್ಥೆ ಒದಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಯುವ ವಿದ್ಯಾರ್ಥಿಗಳನ್ನು ಸಮಾರಂಭ ಸ್ಥಳಕ್ಕೆ ಕರೆತರಲು ರಸ್ತೆ ಸಾರಿಗೆ ನಿಗಮ ಮತ್ತ ಖಾಸಗಿ ಒಡೆತನದ ಬಸ್ ಹಾಗೂ ಇತರೆ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಯುವನಿಧಿ ಯೋಜನೆಯ ವಿದ್ಯಾವಂತ ನಿರುದ್ಯೋಗಿ ಫಲಾನುಭವಿಗಳಲ್ಲದೇ, ಅಂತಿಮ ವರ್ಷಗಳ ಸೆಮಿಸ್ಟರ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಡಿಪ್ಲೋಮಾ, ಪದವಿ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ವ್ಯವಸ್ಥಿತ ಆಯೋಜನೆಗಾಗಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ.
ಪ್ರತಿ ಬಸ್ ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದಲ್ಲದೇ, ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವಿದ್ಯಾರ್ಥಿಯ ಹೆಸರು ಮತ್ತು ಮೊಬೈಲ್ ನಂಬರ್ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಏನಿದು ಯುವನಿಧಿ ಯೋಜನೆ?
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಯುವನಿಧಿ ಯೋಜನೆಯೂ ಒಂದಾಗಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದೀಗ ಐದನೇ ಗ್ಯಾರಂಟಿ ಯುವನಿಧಿ ಜಾರಿಗೊಳಿಸಲಿದೆ. ಈ ಯೋಜನೆಯ ಪ್ರಕಾರ ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು ಭತ್ಯೆ ಸಿಗಲಿದೆ. ಪದವೀಧರರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಿದರೆ, ಡಿಪ್ಲೋಮಾ ಪದವೀಧರರಿಗೆ 1500 ರೂಪಾಯಿ ನೀಡಲಾಗುತ್ತದೆ. ಪದವೀಧರರಿಗೆ ಉದ್ಯೋಗ ಸಿಗುವರೆಗೆ ಅಥವಾ ಗರಿಷ್ಠ 2 ವರ್ಷದವರೆಗೆ ನೀಡಲಾಗುತ್ತದೆ.
ನೋಂದಣಿ ಮಾಡುವುದು ಹೇಗೆ?;
ಉದ್ಯೋಗ ಸಿಕ್ಕಿದ ಕೂಡಲೇ ಈ ಸೌಲಭ್ಯ ಸ್ಥಗಿತಗೊಳ್ಳಲಿದೆ.
ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಯಾಗಿರಬೇಕು.
2023ರಲ್ಲಿ ಪದವಿ/ ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಉತ್ತೀರ್ಣರಾಗಿ 180 ದಿನಗಳಾದರೂ ಉದ್ಯೋಗ ಸಿಗದೆ ನಿರುದ್ಯೋಗಿಯಾಗಿರಬೇಕು.
ಅರ್ಜಿ ಸಲ್ಲಿಸಿದ ದಿನದಿಂದ ಹುದ್ದೆ ಸಿಗುವವರೆಗೂ ಅಥವಾ 2ವರ್ಷ ಗರಿಷ್ಠ ಅವಧಿವರೆಗೆ ಮಾತ್ರ ನಿರುದ್ಯೋಗ ಭತ್ಯೆ ಸಿಗಲಿದೆ.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಎಸ್‍ಎಸ್‍ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರಗಳು ಹಾಗೂ ರೇಷನ್ ಕಾರ್ಡ್ ಅಗತ್ಯ. ಅರ್ಜಿಯನ್ನು ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಸೇವಾಸಿಂಧು ಪೋರ್ಟಲ್ನಲ್ಲಿ ಸಲ್ಲಿಸಬಹುದಾಗಿದೆ.
ಅರ್ಹರಾಗದೇ ಇರುವವರು ಯಾರು?
*ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುವವರಿಗೆ ಯೋಜನೆ ಅನ್ವಯಿಸುವುದಿಲ್ಲ.
ಶಿಷ್ಯ ವೇತನವನ್ನು ಪಡೆಯುತ್ತಿರುವವರಿಗೆ ಯುವನಿಧಿ ಅನ್ವಯಿಸುವಿದಿಲ್ಲ.
*ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರಿಗೆ ಅನ್ವಯ ಆಗುವುದಿಲ್ಲ.
ಕೋಟ್ಸ್
ನಮ್ಮದು ನುಡಿದಂತೆ ನಡೆಯುವ ಸರ್ಕಾರ. ವಿಧಾನಸಭಾ ಚುನಾವಣೆಗೂ ಮುನ್ನಾ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳನ್ನು ಅನುಷ್ಟಾನ ಮಾಡಿದ್ದೇವೆ.
ದೇಶದ ಜನತೆ ಕರ್ನಾಟಕ ಮಾದರಿಯ ಆಡಳಿತವನ್ನು ಎದುರು ನೋಡುತ್ತಿದ್ದಾರೆ.
- ಡಾ. ಶರಣ್ ಪ್ರಕಾಶ್ ಪಾಟೀಲ್
ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ
Post a Comment