ಬೆಂಗಳೂರು: ಬಡವರ ಮಕ್ಕಳಿಗೆ ಯುವನಿಧಿ ಗ್ಯಾರಂಟಿ, 30 ಲಕ್ಷ ಕೊಟ್ಟವರಿಗೆ ಸರ್ಕಾರಿ ನೌಕರಿ ಗ್ಯಾರಂಟಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಶಾಸಕ ನಂಜೇಗೌಡ ನೇತೃತ್ವದ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ( ಕೋಮಲ್) ಹಗರಣವನ್ನು ಇಡಿ ಬಯಲಿಗೆಳೆದಿದೆ. ಸಹಕಾರಿ ಹಾಲು ಉತ್ಪಾದಕರ ಒಟ್ಟೂಕದಲ್ಲಿನ ನೇಮಕಾತಿ ಹಗರಣವನ್ನು ಇ.ಡಿ ಬಯಲಿಗೆಳೆದಿದೆ.
ಈ ಹಿನ್ನೆಲೆಯಲ್ಲಿ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಅವರ ಮೇಲೆ ಜನವರಿ 8 ಕ್ಕೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಕೋಚಿಮುಲ್ ನ 30 ಹುದ್ದೆಗೆ ಹಣ ಪಡೆದುಕೊಂಡು ನೇಮಕಾತಿ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿತ್ತು.
ಬೋಗಸ್ ದಾಖಲೆ ಸೃಷ್ಟಿ ಮಾಡಿ 150 ಕೋಟಿ ಜಮೀನು ಹಂಚಿಕೆ ಮಾಡಿರುವುದು ಕೂಡಾ ಪತ್ತೆಯಾಗಿತ್ತು. ದಾಳಿ ವೇಳೆ 25 ಲಕ್ಷ ನಗದು, ಅಕ್ರಮ ಆಸ್ತಿ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಶುಕ್ರವಾರ ಯುವನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ.
ನಿರುದ್ಯೋಗಿ ಪದವೀಧರ ಯುವಕರಿಗೆ ಭತ್ಯೆ ನೀಡುವ ನಿಟ್ಟಿನಲ್ಲಿ ಈ ಯೋಜನೆಗೆ ಚಾಲನೆ ಸಿಗಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಡವರ ಮಕ್ಕಳಿಗೆ ಯುವನಿಧಿ ಗ್ಯಾರಂಟಿಯನ್ನು ಒಂದು ಕಡೆಯಲ್ಲಿ ನೀಡಿದರೆ, 30 ಲಕ್ಷ ಕೊಟ್ಟವರಿಗೆ ಸರ್ಕಾರಿ ನೌಕರಿಯನ್ನು ಮಾರಾಟ ಮಾಡುವ ಗ್ಯಾರಂಟಿಯನ್ನು ಸರ್ಕಾರ ನೀಡುತ್ತಿರುವುದು ಕಾಂಗ್ರೆಸ್ ಶಾಸಕರ ಮೇಲಿನ ಇ.ಡಿ ದಾಳಿಯ ಸಂದರ್ಭದಲ್ಲಿ ಬಹಿರಂಗಗೊಂಡಿದೆ ಎಂದು ಆರ್. ಅಶೋಕ್ ಲೇವಡಿ ಮಾಡುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Post a Comment