ಮೈಸೂರು: ಮೈಸೂರು ಭಾಗದ ಭಕ್ತಾಧಿಗಳು ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ತೆರಳಲು 15 ದಿನಕ್ಕೊಂದು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
"ಫೆ. 4ರಂದು ಮಧ್ಯಾಹ್ನ 12.15ಕ್ಕೆ ಮೈಸೂರಿನಿಂದ ಅಯೋಧ್ಯೆಗೆ ಮೊದಲ ವಿಶೇಷ ರೈಲು ಹೊರಡುತ್ತದೆ. 15 ದಿನಕ್ಕೊಮ್ಮೆ ನಿರಂತರವಾಗಿ ರೈಲು ಸಂಚಾರ ಮಾಡಲಿದೆ. ಸದ್ಯದಲ್ಲಿಯೇ ಬುಕಿಂಗ್ ಓಪನ್ ಮಾಡಲಾಗುತ್ತದೆ. ಹೋಗಿ ಬರಲು ಮೂರು ಸಾವಿರ ರೂ. ಪ್ರಯಾಣ ದರ ನಿಗಗೊಳಿಸಲಾಗಿದೆ. ರೈಲಿನಲ್ಲಿ ಊಟ, ತಿಂಡಿ ವ್ಯವಸ್ಥೆ, ಅಯೋಧ್ಯೆಯಲ್ಲಿ ಉಳಿದುಕೊಳ್ಳಲು ವಸತಿ, ವ್ಯವಸ್ಥೆ ಮಾಡುತ್ತೇವೆ. ದರ್ಶನ ಮಾಡಿಕೊಂಡು ಬರಬಹುದು," ಎಂದು 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.
"ಇಂಡಿಯಾ ಗೇಟ್ ಬಳಿ ಸುಭಾಷ್‌ಚಂದ್ರ ಬೋಸ್ ಅವರ ಪ್ರತಿಮೆಯನ್ನು ಮಾಡಿಕೊಡುವಾಗ ನಾನೇ ಪ್ರಧಾನ ಮಂತ್ರಿಗಳಿಗೆ ಅರುಣ್ ಯೋಗಿರಾಜ್ ಅವರನ್ನು ಪರಿಚಯಿಸಿದ್ದೆ. ಅದಾದ ನಂತರ ಅವರಿಗೆ ಅವಕಾಶಗಳ ಮಹಾಪೂರವೇ ಹರಿದು ಬಂದಿದೆ. ಈಗ ಅಯೋಧ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿಯನ್ನು ಕೆತ್ತಿದವರೂ ಮೈಸೂರಿನವರೇ ಆಗಿದ್ದಾರೆ. ಅದಕ್ಕಾಗಿ ಬಳಕೆ ಮಾಡಿದ ಕಲ್ಲು ಮೈಸೂರಿನ ಎಚ್.ಡಿ. ಕೋಟೆ ತಾಲೂಕಿನ ಹಾರೋಹಳ್ಳಿಯದು. ಆ ಮೂಲಕ ಮೈಸೂರು ಮತ್ತು ಅಯೋಧ್ಯೆ ನಡುವೆ ಶಾಶ್ವತವಾದ ಸಂಬಂಧ ಏರ್ಪಟ್ಟಿದೆ," ಎಂದು ವಿವರಿಸಿದರು.
"400 ವರ್ಷಗಳಿಗಿಂತ ಹೆಚ್ಚು ಕಾಲ ಲಕ್ಷಾಂತರ ಹಿಂದುಗಳು ಅಯೋಧ್ಯೆಯಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಾಣ ನೀಡಿದ್ದಾರೆ. ಗೋಲಿಬಾರ್‌ಗೆ ಒಳಗಾಗಿದ್ದಾರೆ. ಕೊನೆಗೆ ಕೋರ್ಟ್ ಮುಖಾಂತರ ನ್ಯಾಯಯುತವಾಗಿ ಜಾಗವನ್ನು ಪಡೆದುಕೊಂಡು ಭವ್ಯವಾದ ದೇವಾಲಯ ನಿರ್ಮಾಣವಾಗುತ್ತಿದೆ. 22ರಂದು ಪ್ರತಿಷ್ಠಾಪನೆ ಇದೆ. ಹೀಗಾಗಿ ದೇಶದಾದ್ಯಂತ ಹಬ್ಬದ ಸನ್ನಿವೇಶ ಸೃಷ್ಟಿಯಾಗಿದೆ," ಎಂದರು.
"ಈ ದೇಶ ರಾಮರಾಜ್ಯ ಆಗಬೇಕೆಂದು ಮಹತ್ಮಾ ಗಾಂಧಿ ಕನಸು ಕಂಡರು. ಮುಕ್ತವಾದ, ಎಲ್ಲರ ನೋವುಗಳನ್ನು ದೂರಗೊಳಿಸುವ ಮಾತೃ ಹೃದಯಿ ಸ್ಪಂದನೆಯ ನ್ಯಾಯ ಸಮ್ಮತ ವ್ಯವಸ್ಥೆ ಕಲ್ಪಿಸುವ ಆಡಳಿತಕ್ಕೆ ರಾಮರಾಜ್ಯ ಎನ್ನಲಾಗುತ್ತದೆ. ರಾಮ ಒಬ್ಬ ಅಗಸನ ಮಾತಿಗೂ ಅಂಜಿದ್ದಾನೆ. ಕೊಟ್ಟ ಮಾತಿನಂತೆ ವನವಾಸ ಅನುಭವಿಸಿದ್ದಾನೆ. ಜನ ಸಾಮಾನ್ಯರ ಮಾತಿಗೆ ಅಷ್ಟರ ಮಟ್ಟಿಗೆ ಬೆಲೆ ನೀಡುವ, ಎಲ್ಲರ ಮಾತಿಗೂ ಮನ್ನಣೆ ನೀಡುವ ವ್ಯವಸ್ಥೆಯನ್ನು ಆದರ್ಶವಾಗಿ ಇಟ್ಟುಕೊಂಡಿರುವ ಆಡಳಿತ ವ್ಯವಸ್ಥೆ ಬರಬೇಕು ಎಂದು ಮಹಾತ್ಮ ಗಾಂಧಿ ಬಯಸಿದ್ದರು," ಎಂದು ಪ್ರತಾಪ್ ಸಿಂಹ ಸ್ಮರಿಸಿದರು.
Post a Comment