ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟು ರಾಜ್ಯಾದ್ಯಂತ ಬರಗಾಲ ಉಂಟಾಗಿರುವುದು ಗೊತ್ತಿರುವ ಸಂಗತಿ. ರಾಜ್ಯದೆಲ್ಲೆಡೆ ಬರಗಾಲದ ಪರಿಣಾಮ ವಿವಿಧ ಬೆಳೆಗಳ ಮೇಲೆ ಪರಿಣಾಮ ಬೀರಿದ್ದು, ಇದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟು ರಾಜ್ಯಾದ್ಯಂತ ಬರಗಾಲ ಉಂಟಾಗಿರುವುದು ಗೊತ್ತಿರುವ ಸಂಗತಿ. ರಾಜ್ಯದೆಲ್ಲೆಡೆ ಬರಗಾಲದ ಪರಿಣಾಮ ವಿವಿಧ ಬೆಳೆಗಳ ಮೇಲೆ ಪರಿಣಾಮ ಬೀರಿದ್ದು, ಇದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ.
ರಾಜ್ಯದಲ್ಲಿ ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಯ 839 ಮಿಮೀ ಬದಲಿಗೆ 633 ಮಿಮೀ ಮಳೆಯಾಗಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ನ ಎರಡನೇ ವಾರದವರೆಗೆ ಈಶಾನ್ಯ ಮಾನ್ಸೂನ್ ಅವಧಿಯಲ್ಲಿ ವಾಡಿಕೆಯಂತೆ 188 ಮಿಮೀಗಿಂತ 113 ಮಿಮೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಸ್ವಲ್ಪ ಮಳೆಯಾಗಿದ್ದರೂ ರಾಜ್ಯವು ಕೊರತೆಯನ್ನು ಎದುರಿಸುತ್ತಿದೆ. 31 ಜಿಲ್ಲೆಗಳ ಪೈಕಿ 24 ಜಿಲ್ಲೆಗಳು ಕೊರತೆ ಎದುರಿಸುತ್ತಿವೆ.
ಈ ವರ್ಷ 148 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಬೆಳೆಗಳನ್ನು ನಿರೀಕ್ಷಿಸಲಾಗಿತ್ತು ಎಂದು ಕೃಷಿ ಇಲಾಖೆಯ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ಆದರೆ ಬರಗಾಲದ ಕಾರಣ 60 ಲಕ್ಷ ಮೆಟ್ರಿಕ್ ಟನ್ ಕಡಿಮೆಯಾಗುವ ನಿರೀಕ್ಷೆ ಇದೆ. ರಾಜ್ಯದ ಹಲವೆಡೆ ಬಿತ್ತನೆ ಕಾರ್ಯ ನಡೆದಿಲ್ಲ. ಎಲ್ಲೆಲ್ಲಿ ಬಿತ್ತನೆ ಮಾಡಿದರೂ ಬೆಳೆಗಳು ಒಣಗಿವೆ ಇಲ್ಲವೇ ಕಡಿಮೆ ಫಸಲು ಸಮಸ್ಯೆ ಎದುರಿಸುತ್ತಿವೆ.
ಕಡಿಮೆ ಉತ್ಪಾದನೆಯಾದಾಗ, ಆಹಾರ ಧಾನ್ಯಗಳ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಬೆಲೆಗಳು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ ಎನ್ನುತ್ತಾರೆ.
ಕ್ವಿಂಟಾಲ್‌ಗೆ 7,000 ರೂಪಾಯಿಗೆ ಮಾರಾಟವಾಗುತ್ತಿದ್ದ ತೊಗರಿ ಬೇಳೆ ಈಗ 12,000 ರೂಪಾಯಿಗೆ ಮಾರಾಟವಾಗಿದ್ದು, ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆ.ಜಿ.ಗೆ 70 ರೂಪಾಯಿಗೆ ತೊಗರಿಬೇಳೆ ಖರೀದಿಸುತ್ತಿದ್ದ ಜನಸಾಮಾನ್ಯರು ಈಗ 120 ರೂಪಾಯಿ ತೆರಬೇಕಾಗುತ್ತದೆ. ಅದೇ ರೀತಿ ಉದ್ದಿನಬೇಳೆ ಕೆಜಿಗೆ 85 ರೂಪಾಯಿಗಳಿಂದ 130 ರೂಪಾಯಿಗೆ ಏರಿಕೆಯಾಗಿದೆ. ಇತರ ಅಗತ್ಯ ವಸ್ತುಗಳ ಬೆಲೆಗಳು ನಿರೀಕ್ಷಿತ ಮಟ್ಟದಲ್ಲಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬೆಲೆ ಹೆಚ್ಚಾಗಬಹುದು ಎನ್ನುತ್ತಾರೆ.
ಹೊಸ ಬೆಳೆಗಳು ಬರುವವರಿಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (FKCCI) ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಅಕ್ಕಿ ಮತ್ತು ಬೇಳೆಕಾಳುಗಳಲ್ಲಿ ಶೇಕಡಾ 30ರಿಂದ 40ರಷ್ಟು ಬೆಲೆ ವ್ಯತ್ಯಾಸವಾಗಲಿದೆ. ಹೊಸ ಬೆಳೆಗಳು ಮಾರುಕಟ್ಟೆಗೆ ಬರುವವರೆಗೂ ಬೆಲೆ ಏರಿಕೆ ಮುಂದುವರಿಯಲಿದೆ.
ಈಗಾಗಲೇ ಆಹಾರದ ಬೆಲೆಯನ್ನು ಹೆಚ್ಚಿಸಿರುವ ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳು ಅಗತ್ಯ ವಸ್ತುಗಳ ಬೆಲೆಗಳ ಏರಿಕೆಯನ್ನು ಅವಲಂಬಿಸಿ ಮತ್ತಷ್ಟು ಹೆಚ್ಚಳವಾಗಬಹುದು ಎಂದರು. ಇದಕ್ಕೆ ಬರಗಾಲವೇ ಮುಖ್ಯ ಕಾರಣವಾಗಿದ್ದು ಮುಂದಿನ ವರ್ಷ ಮಳೆ ಬರುವವರೆಗೆ ನಮಗೆ ಬೇರೆ ದಾರಿಯಿಲ್ಲ ಎನ್ನುತ್ತಾರೆ.
Post a Comment