ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾರಿಯಲ್ಲಿರುವ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯದಲ್ಲಿ ಶೀಘ್ರವೇ ಹೊಸ ನೀತಿ ರೂಪಿಸಲಾಗುವುದು ಎಂದು ತಿಳಿಸಿದರು.
ಸಾಂಕೇತಿಕ ಚಿತ್ರ
ಬೆಳಗಾವಿ: ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾರಿಯಲ್ಲಿರುವ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯದಲ್ಲಿ ಶೀಘ್ರವೇ ಹೊಸ ನೀತಿ ರೂಪಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಹೆಣ್ಣು ಭ್ರೂಣಹತ್ಯೆ ಪ್ರಕರಣಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ನಿನ್ನೆ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಗಮನ ಸೆಳೆಯುವ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಮಂಡ್ಯ ಜಿಲ್ಲೆಯಲ್ಲಿ ವರದಿಯಾಗಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಸೇರಿದಂತೆ ಇತ್ತೀಚಿನ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್, ಹೊಸ ನೀತಿಯಲ್ಲಿ ಅಳವಡಿಸುವ ಉದ್ದೇಶಿತ ಅಂಶಗಳನ್ನು ವಿವರಿಸಿದರು.
ಪೊಲೀಸರ ಸಹಕಾರ ಅತ್ಯಗತ್ಯವಾಗಿರುವುದರಿಂದ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಿದ್ದು, ಇದರಲ್ಲಿ ಒಬ್ಬ ಎಎಸ್‌ಪಿ ಅಥವಾ ಡಿವೈಎಸ್‌ಪಿ ಶ್ರೇಣಿಯ ಪೊಲೀಸ್ ಅಧಿಕಾರಿಯನ್ನು ಭಾಗವಾಗಿ ಸೇರಿಸಲಾಗುವುದು ಎಂದರು.
ಹೆಣ್ಣು ಭ್ರೂಣಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ, ಅಪರಾಧಿಗಳ ವಿರುದ್ಧ ಸಾಕ್ಷ್ಯವನ್ನು ಸಂಗ್ರಹಿಸಲು ಪೊಲೀಸರ ಒಳಗೊಳ್ಳುವಿಕೆ ಅಗತ್ಯವಿದೆ, ಹೆಣ್ಣು ಭ್ರೂಣ ಹತ್ಯೆ ಮಾಡಿಸುವವರು ಮತ್ತು ಮಾಡುವವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವುದು ಮುಖ್ಯವಾಗಿರುತ್ತದೆ. ಅದಕ್ಕೆ ಮಾರುವೇಷದಿಂದ ಹೋಗಿ ಕಾರ್ಯಾಚರಣೆ ಮಾಡುವ(decoy operation) ಯೋಜಿಸಬೇಕು, ಇದು ಪೊಲೀಸರ ಒಳಗೊಳ್ಳುವಿಕೆಯಿಂದ ಮಾತ್ರ ಸಾಧ್ಯ, ಎಂದು ಅವರು ವಿವರಿಸಿದರು.
ತಮಿಳುನಾಡಿನಲ್ಲಿ ಈಗಾಗಲೇ ಇದೇ ರೀತಿಯ ಕಾನೂನನ್ನು ರಚಿಸಲಾಗಿದ್ದು, ಅಲ್ಲಿ ಪೊಲೀಸರು ಮತ್ತು ಆರೋಗ್ಯ ಇಲಾಖೆಯೂ ಭಾಗಿಯಾಗಿದೆ ಎಂದು ಸಚಿವರು ಪ್ರತಿಪಾದಿಸಿದರು. ಹೆಣ್ಣು ಭ್ರೂಣ ಹತ್ಯೆಯನ್ನು ಕೇವಲ ಅಪರಾಧ ಎಂದು ಪರಿಗಣಿಸದೆ ಸಾಮಾಜಿಕ ಸಮಸ್ಯೆ ಎಂದು ಒಪ್ಪಿಕೊಂಡ ಅವರು, ಶಾಲಾ ಹಂತದಲ್ಲಿಯೇ ಹೆಣ್ಣು ಮಗುವನ್ನು ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಮಾಜವು ಹೆಣ್ಣುಮಕ್ಕಳನ್ನು ಹೊರೆಯಾಗಿ ಪರಿಗಣಿಸುವುದು ತುಂಬಾ ದುರದೃಷ್ಟಕರವಾಗಿದೆ, ಲಿಂಗ ನಿರ್ಣಯ ಪರೀಕ್ಷೆಯನ್ನು ನಿಷೇಧಿಸಲಾಗಿದೆ ಎಂಬ ವಾಸ್ತವದ ಹೊರತಾಗಿಯೂ ಹಲವಾರು ದಂಪತಿಗಳು ಹೆಣ್ಣು ಮಗುವನ್ನು ಕೊನೆಗೊಳಿಸಲು ನಿರ್ಧರಿಸುತ್ತಾರೆ. ಸಮಾಜದಲ್ಲಿ ಗಂಡು-ಹೆಣ್ಣು ಲಿಂಗ ಅನುಪಾತವನ್ನು ಕಾಪಾಡಿಕೊಳ್ಳಲು ಹೆಣ್ಣು ಮಗುವಿನ ಪ್ರಾಮುಖ್ಯತೆಯ ಬಗ್ಗೆ ಜನಸಂಖ್ಯೆಗೆ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಸಚಿವರು ತಿಳಿಸಿದರು.
Post a Comment