ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ಬೆಸ್ಕಾಂ ಅಧಿಕಾರಿಯ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಕೋಟ್ಯಾಂತರ ರುಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
ಚನ್ನಕೇಶವ ಅವರ ನಿವಾಸದಲ್ಲಿ ಜಪ್ತಿ ಮಾಡಲಾಗಿರುವ ವಸ್ತುಗಳು.
ಬೆಂಗಳೂರು: ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ಬೆಸ್ಕಾಂ ಅಧಿಕಾರಿಯ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಕೋಟ್ಯಾಂತರ ರುಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
ಬೆಂಗಳೂರಿನ ಬೆಸ್ಕಾಂ ಜಯನಗರ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ (ಇಇ) ಹೆಚ್.ಡಿ.ಚೆನ್ನಕೇಳವ ಅವರ ಮೇಲೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡಸಿದ್ದರು.
ದಾಳಿ ವೇಳೆ ಮನೆಯಲ್ಲಿಯೇ ಇದ್ದ ಚೆನ್ನಕೇಶವ ಅವರು ಲೋಕಾಯುಕ್ತ ಪೊಲೀಸರನ್ನು ಕಂಡು ಬೆಚ್ಚಿದ್ದಾರೆ. ಮುಂಜಾನೆಯಿಂದ ಸಂಜೆಯವರೆಗೂ ಲೋಕಾಯುಕ್ತ ಅಧಿಕಾರಿಗಳು ಚೆನ್ನಕೇಶವ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಪರಿಶೀಲನೆ ನಡೆಸಿದರು.
ದಾಳಿಯಲ್ಲಿ ಚೆನ್ನಕೇಶವ ಅವರ ನಿವಾಸದಲ್ಲಿ ರೂ.6 ಲಕ್ಷ ನಗದು, ಸುಮಾರು 3 ಕೆಜಿ ಚಿನ್ನಾಭರಣ, 28 ಕೆಜಿ ಬೆಳ್ಳಿ ವಸ್ತುಗಳು ಹಾಗೂ ರೂ.25 ಲಕ್ಷ ಮೌಲ್ಯದ ವಜ್ರಗಳು, ರೂ.5 ಲಕ್ಷ ಮೌಲ್ಯದ ಪುರಾತನ ವಸ್ತುಗಳು ಸೇರಿದಂತೆ ಸುಮಾರು 1.44 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದೆ. ಅಲ್ಲದೆ, ರೂ.4.07 ಕೋಟಿ ಮೌಲ್ಯದ ಚರಾಸ್ತಿ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚೆನ್ನಕೇಶವ ಅವರ ಬಾವಮೈದ ಸಹಕಾರನಗರದ ನಿವಾಸಿ ತರುಣ್ ಮನೆಯಲ್ಲಿ 55 ಗ್ರಾಂ ಚಿನ್ನಾಭರಣ, ಬರೋಬ್ಬರಿ ರೂ.92.95 ಲಕ್ಷ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಂಬಂಧಿ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಭುಲಿಂಗ ಮಾನಕರ ಅವರಿಗೆ ಸೇರಿದ ನಾಲ್ಕು ಕಡೆ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ.
ಯಾದಗಿರಿಯಲ್ಲಿರುವ ಅವರ ಕಚೇರಿ ಮತ್ತು ನಿವಾಸ, ಕಲಬುರಗಿಯಲ್ಲಿರುವ ಮನೆ ಮತ್ತು ತೋಟದ ಮನೆಗಳಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ 1 ಕೋಟಿ ಮೌಲ್ಯದ ಸ್ಥಿರ ಆಸ್ತಿ ಮತ್ತು 49.04 ಲಕ್ಷ ರೂ. (ಒಟ್ಟು ಮೌಲ್ಯ 1.49 ಕೋಟಿ ರೂ.) ಚರಾಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
Post a Comment