ಗುಣಮಟ್ಟದ ಹಾಗೂ ಸಮರ್ಪಕ ಬಿಸಿಯೂಟ ನೀಡುತ್ತಿಲ್ಲ ಎಂದು ಆರೋಪಿಸಿದ ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಲಕ್ಕಲಕಟ್ಟಿ ಗ್ರಾಮದ ಶಾಲೆಯ ಮುಂದೆ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಗದಗ: ಗುಣಮಟ್ಟದ ಹಾಗೂ ಸಮರ್ಪಕ ಬಿಸಿಯೂಟ ನೀಡುತ್ತಿಲ್ಲ ಎಂದು ಆರೋಪಿಸಿದ ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ 441 ವಿದ್ಯಾರ್ಥಿಗಳಿದ್ದು, ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದಾರೆ. ಶಾಲೆಯಲ್ಲಿ ಬೇಯಿಸಿದ ಬೇಳೆಕಾಳು, ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗಿದೆ. ಜೊತೆಗೆ ಶೌಚಾಲಯ ಕೂಡ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಶಾಲೆಯಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ ಕೂಡ ಕಳಪೆಯಾಗಿದ್ದು, ನಿತ್ಯ 4 ಕೆಜಿ ತರಕಾರಿ ಮಾತ್ರ ಸಾಂಬಾರ್ ಮಾಡಲು ಬಳಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಶಾಲಾ ಶಿಕ್ಷಕರು ಮಾತನಾಡಿ, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿರುವ ಕುರಿತು ನಮಗೆ ತಿಳಿದಿಲ್ಲ. ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ಹೇಳಿದರು.
ಆದರೆ, ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲ್ಲದೆ, ಶಾಲಾ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ, ಅಧಿಕಾರಿಗಳು ಕ್ರಮ ಕೈಗೊಳ್ಳದ ಹೊರತು ತರಗತಿಗಳಿಗೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಶಾಲಾ ಮುಖ್ಯೋಪಾಧ್ಯಾಯ ಎಎಸ್ ರಾಥೋಡ್ ಅವರನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಸ್ಥಳೀಯ ನಿವಾಸಿ ಪ್ರದೀಪ ಲಮಾಣಿ ಮಾತನಾಡಿ, ‘ನನ್ನ ಮಗ 6ನೇ ತರಗತಿಯಲ್ಲಿ ಓದುತ್ತಿದ್ದು, ಅಸಮರ್ಪಕ ಆಹಾರ ನೀಡುತ್ತಿರುವ ವಿಷಯ ತಿಳಿದು ಕೆಲ ದಿನಗಳ ಹಿಂದೆ ಶಾಲೆಗೆ ತೆರಳಿ ತರಗತಿ ಶಿಕ್ಷಕರೊಂದಿಗೆ ಮಾತನಾಡಿದ್ದೆವು. ಈ ವೇಳೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಆದರೆ, ಇಲ್ಲಿಯವರೆಗೆ ಏನನ್ನೂ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Post a Comment