ವಿದ್ಯುತ್ ಕಳವು ಆರೋಪ: ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲು!

 ವಿದ್ಯುತ್ ಕಳ್ಳತನದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹೆಚ್.ಡಿ ಕುಮಾರಸ್ವಾಮಿ

Posted By : Rekha.M
Source : Online Desk
ಬೆಂಗಳೂರು: ವಿದ್ಯುತ್ ಕಳ್ಳತನದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಸ್ಕಾಂ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಕುಮಾರಸ್ವಾಮಿ ಅವರ ವಿರುದ್ಧ ಜಯನಗರ ಜಾಗೃತದಳದ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಂಗಳವಾರ (ನ.14) ರಂದು ಅಪರಾಧ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಇಇ ಪ್ರಶಾಂತ್‌ ಕುಮಾರ್‌ ಎಂಬುವವರು ದೂರು ನೀಡಿದ್ದಾರೆ. ಈ ದೂರಿನನ್ವಯ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಎಚ್.ಡಿ ಕುಮಾರಸ್ವಾಮಿಯವರು ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕುರಿತು ವಿಡಿಯೋ, ಫೋಟೋ ಸಮೇತ ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಇದಕ್ಕೂ ಮೊದಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಬೆಸ್ಕಾಂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸುಧಾಕರ್ ಅವರು, ಮನೆ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆಯಲಾಗಿತ್ತು. ಅದನ್ನು ಪರಿಶೀಲನೆ ಮಾಡಲಾಗಿದೆ. ಸ್ಥಳದಲ್ಲಿ ಏನಿದೆ ಎಲ್ಲವನ್ನೂ ಪರಿಶೀಲನೆ ಮಾಡಿದ್ದೇವೆ. ಹೆಚ್ಚುವರಿ ತನಿಖೆ ಸಹ ನಾವು ಮಾಡಬೇಕಿದೆ. ಇದು ದಂಡ ವಿಧಿಸಬಹುದಾದ ಶಿಕ್ಷೆ ಮಾತ್ರ. ನಮ್ಮ ಮೇಲಧಿಕಾರಿಗಳಿಗೆ ಎಲ್ಲ ಮಾಹಿತಿಯನ್ನು ನೀಡುತ್ತೇವೆ. ಲೈಟಿಂಗ್ಸ್‌ಗೆ ನೇರವಾಗಿ ವಿದ್ಯುತ್ ಕಂಬದಿಂದ ಸಂಪರ್ಕ ನೀಡಲಾಗಿದೆ. ಕುಮಾರಸ್ವಾಮಿ ಅವರು ತಪ್ಪು ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ನಾವು ಈಗ ಪರಿಶೀಲನೆ ಮಾಡುವ ವೇಳೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.


Post a Comment

Previous Post Next Post