ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡಲು ಮುಂದಾಗಿರುವ ಸರ್ಕಾರ ಈಗ ನಗದು ವರ್ಗಾವಣೆಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಬಿಪಿಎಲ್ ಕಾರ್ಡ್‌ಗಳಿಗೆ ಇಬ್ಬರು ಮುಖ್ಯಸ್ಥರಿದ್ದರೆ ಅಕ್ಕಿ ಹಣ ನೀಡದಿರಲು ಸರ್ಕಾರ ಮುಂದಾಗಿಲ್ಲ. ಮುಖ್ಯಸ್ಥರನ್ನು ಆಯ್ಕೆ ಮಾಡಿಕೊಂಡು ಬ್ಯಾಂಕ್ ಖಾತೆಯ ವಿವರಗಳನ್ನು ಜುಲೈ 20ರೊಳಗೆ ನ್ಯಾಯಬೆಲೆ ಅಂಗಡಿಯಲ್ಲಿ ನೀಡಬೇಕು ಎಂದು ಮಾಹಿತಿ ನೀಡಿದೆ.
ಗುರುವಾರ ಅನ್ನಭಾಗ್ಯ ಯೋಜನೆ ಜಾರಿ ಕುರಿತು ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅದರನ್ವಯ ಅಂತ್ಯೋದಯ ಕಾರ್ಡು ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ ನಗದು ವರ್ಗಾವಣೆ ಸೌಲಭ್ಯ ಸಿಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಈಗಾಗಲೇ ಅಂತ್ಯೋದಯ ಕಾರ್ಡ್‌ನಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಜನ ಹೊಂದಿರುವ ಕುಟುಂಬಗಳು 30 ಕೆಜಿ ಅಕ್ಕಿ ಪಡೆಯುತ್ತಿರುವುದರಿಂದ ಅವರಿಗೆ ಹಣ ನೀಡದಿರಲು ನಿರ್ಧರಿಸಿದೆ.
ಮೂರಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರಿದ್ದರೆ ಮಾತ್ರ ಹೆಚ್ಚುವರಿ ಸದಸ್ಯರಿಗೆ ಹಣ ಸಿಗಲಿದೆ. 4 ಸದಸ್ಯರು ಇರುವ ಕುಟುಂಬಕ್ಕೆ 170 ರೂ., ಐವರು ಸದಸ್ಯರಿದ್ದರೆ 340 ರೂ., ಆರು ಸದಸ್ಯರಿದ್ದರೆ 510 ರೂ.ಗಳನ್ನು ನೀಡಲಾಗುವುದು. ಹೆಚ್ಚಿನ ಸದಸ್ಯರು ಇದ್ದಲ್ಲಿ ಇದೇ ಅನುಪಾತದಲ್ಲಿ ದುಡ್ಡನ್ನು ನೀಡಲಾಗುತ್ತದೆ. ಇನ್ನು, ಕಳೆದ ಮೂರು ತಿಂಗಳುಗಳಲ್ಲಿ ಪಡಿತರ ಸೌಲಭ್ಯ ಪಡೆದಿದ್ದರೆ ಮಾತ್ರ ಅನ್ನಭಾಗ್ಯ ನಗದು ವರ್ಗಾವಣೆಗೆ ಕುಟುಂಬ ಅರ್ಹವಾಗಲಿದೆ.
ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಬಿಪಿಎಲ್ ಕುಟುಂಬಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದೆ. ಕುಟುಂಬದ ಮುಖ್ಯಸ್ಥರನ್ನು ಕುಟುಂಬಗಳು ಆಯ್ಕೆ ಮಾಡಿಕೊಳ್ಳಬೇಕು. ಮಹಿಳಾ ಸದಸ್ಯರಿರುವ ಬಿಪಿಎಲ್ ಕಾರ್ಡ್‌ಗಳಲ್ಲಿ ಮಹಿಳೆಯರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು. ಪ್ರಮುಖವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಬೇಕು.
ಜುಲೈ 20ರೊಳಗೆ ಮಾಹಿತಿ ನೀಡಿ!
ಜುಲೈ 20ರೊಳಗಾಗಿ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ಪಡಿತರ ಚೀಟಿ ಕುಟುಂಬಗಳಿಗೆ ಆಗಸ್ಟ್ ತಿಂಗಳಿನಲ್ಲಿ ದುಡ್ಡು ಸಿಗಲಿದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಬ್ಯಾಂಕ್ ಖಾತೆಯ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯಲ್ಲೇ ನೀಡಬೇಕು ಎಂದು ಸರ್ಕಾರ ತಿಳಿಸಿದೆ.
ಅನ್ನಭಾಗ್ಯ ಯೋಜನೆ!
ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಮಾಸಿಕ ತಲಾ 10 ಕೆಜಿ ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿತ್ತು. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಸಿಗದಿರುವ ಕಾರಣಕ್ಕೆ ಸರ್ಕಾರ ಅಕ್ಕಿ ದಾಸ್ತಾನು ಆಗುವವರೆಗೂ 5 ಕೆಜಿ ಬದಲು ಹಣವನ್ನು ನೀಡಲು ಮುಂದಾಗಿದೆ. ಪ್ರತಿ ಕೆಜಿಗೆ 34 ರೂ.ನಂತೆ ಒಬ್ಬರಿಗೆ 170 ರೂ. ನೀಡಲು ಸರ್ಕಾರ ಮುಂದಾಗಿದ್ದು, ಸದಸ್ಯರು ಹೆಚ್ಚಾದಂತೆ ಅದೇ ಅನುಪಾತದಡಿ ದುಡ್ಡು ಕೂಡ ಹೆಚ್ಚಳವಾಗುತ್ತಾ ಹೋಗುತ್ತದೆ
Post a Comment