'ವರ್ಕ್ ಫ್ರಮ್ ಆಫೀಸ್' ನಿಯಮ: ಐಟಿ ಕ್ಷೇತ್ರದಲ್ಲಿ ಉದ್ಯೋಗ ತೊರೆಯುವ ಮಹಿಳೆಯರ ಸಂಖ್ಯೆ ಹೆಚ್ಚಳ!

 ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಮೂರು ವರ್ಷಗಳ ಕಾಲ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ನೀಡಿದ್ದ ಅನೇಕ ಐಟಿ ಕಂಪನಿಗಳು ಈಗ ತಮ್ಮ ಉದ್ಯೋಗಿಗಳನ್ನು ವಾರಕ್ಕೆ ಕನಿಷ್ಠ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ನಿಯಮ ತಂದಿದೆ. ಇದು ಮಹಿಳಾ ಉದ್ಯೋಗಿಗಳಿಗೆ ಸಮಸ್ಯೆಯಾಗುತ್ತಿದ್ದು, ಕೆಲಸ ತೊರೆಯುವ ಮಹಿಳೆಯರ ಸಂಖ್ಯೆ(Attrition rate) ಇತ್ತೀಚೆಗೆ ಹೆಚ್ಚಾಗುತ್ತಿದೆ.

                                                           ಸಾಂದರ್ಭಿಕ ಚಿತ್ರ

Posted By : Rekha.M
Online Desk

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಮೂರು ವರ್ಷಗಳ ಕಾಲ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ನೀಡಿದ್ದ ಅನೇಕ ಐಟಿ ಕಂಪನಿಗಳು ಈಗ ತಮ್ಮ ಉದ್ಯೋಗಿಗಳನ್ನು ವಾರಕ್ಕೆ ಕನಿಷ್ಠ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ನಿಯಮ ತಂದಿದೆ. ಇದು ಮಹಿಳಾ ಉದ್ಯೋಗಿಗಳಿಗೆ ಸಮಸ್ಯೆಯಾಗುತ್ತಿದ್ದು, ಕೆಲಸ ತೊರೆಯುವ ಮಹಿಳೆಯರ ಸಂಖ್ಯೆ(Attrition rate) ಇತ್ತೀಚೆಗೆ ಹೆಚ್ಚಾಗುತ್ತಿದೆ. 

ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ನಿನ್ನೆ ಒಂದು ಟ್ವೀಟ್ ಮಾಡಿದ್ದಾರೆ. ಕೆಲವು ಅಂದಾಜಿನ ಪ್ರಕಾರ ಐಟಿ ಕಂಪನಿಗಳಲ್ಲಿನ ಮಹಿಳಾ ಉದ್ಯೋಗಿಗಳಲ್ಲಿ ಕೆಲಸ ತೊರೆಯುವವರ ಸಂಖ್ಯೆ ಕಳೆದ ಡಿಸೆಂಬರ್ ನಿಂದ ಶೇಕಡಾ 30ರಿಂದ 40ರಷ್ಟಾಗಿದೆ. ಐಟಿ ಕ್ಷೇತ್ರದಲ್ಲಿ ಕೆಲಸ ತೊರೆಯುವ ಮಹಿಳಾ ಉದ್ಯೋಗಿಗಳ ಸಂಖ್ಯೆ ಸರಾಸರಿ ಪ್ರಸ್ತುತ ಶೇಕಡಾ 15ರಷ್ಟಿದೆ.

"ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಒಟ್ಟಾರೆ ಪಾಲು ಶೇಕಡಾ 1ರಿಂದ 1.5ರಷ್ಟು ಕುಸಿತವಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಈ ರೀತಿ ಐಟಿ ಕ್ಷೇತ್ರದಿಂದ ಮಹಿಳೆಯರು ಹೊರಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ'' ಎಂದು ಸಚಿವರು ಹೇಳಿದ್ದಾರೆ. 

ಮಹಿಳೆಯರು ಕೆಲಸ ತೊರೆಯಲು ಕಾರಣವೇನು?: ಮಹಿಳೆಯರು ಕೆಲಸ ತೊರೆಯಲು ಅನೇಕ ಕಾರಣವಿರಬಹುದು. ಕೋವಿಡ್ ನಂತರ ಕಚೇರಿಗೆ ಬಂದು ಕೆಲಸ ನಿಭಾಯಿಸಲು ಮಹಿಳೆಯರಿಗೆ ಕಷ್ಟವಾಗುತ್ತಿರಬಹುದು. ಅವರ ಹೆರಿಗೆ ರಜೆಯ ನಂತರ ಕೌಶಲ್ಯದ ಅಗತ್ಯತೆ ಹೆಚ್ಚು ಬೇಕಾಗಬಹುದು. 

"ಆದಾಗ್ಯೂ, ಅಧ್ಯಯನದಿಂದ ನಿಖರ ಕಾರಣ ತಿಳಿಯುತ್ತದೆ. ಮಹಿಳೆಯರು ಈ ರೀತಿ ಕೆಲಸ ತೊರೆಯುತ್ತಿರುವುದು ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು, ಕೌಶಲ್ಯಭರಿತ ಮಹಿಳಾ ನೌಕರರನ್ನು ಕಂಪೆನಿಗಳು ಕಳೆದುಕೊಳ್ಳಬಹುದು ಎನ್ನುತ್ತಾರೆ.

ದೇಶದ ಅತಿದೊಡ್ಡ ಐಟಿ ಸೇವೆಗಳ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ಮಹಿಳಾ ಉದ್ಯೋಗಿಗಳಲ್ಲಿ ಹೆಚ್ಚಿನ ಕ್ಷೀಣತೆಯನ್ನು ಕಾಣುತ್ತಿದೆ. TCS ನ ಮಹಿಳಾ ಉದ್ಯೋಗಿಗಳಲ್ಲಿ, ಶೇಕಡಾ 35.7ರಷ್ಟು ಮಂದಿ ಕೆಲಸ ತೊರೆದಿದ್ದಾರೆ. 

ಕಂಪೆನಿಯ ವಾರ್ಷಿಕ ವರದಿಯಲ್ಲಿ, ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್, ಹಣಕಾಸು ವರ್ಷ 2023ರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ತೊರೆದಿದ್ದು, ಲಿಂಗ ವೈವಿಧ್ಯತೆಯನ್ನು ಉತ್ತೇಜಿಸುವ ನಮ್ಮ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಈ ಸಮಸ್ಯೆಯಿಂದ ಹೊರಬರುತ್ತೇವೆ ಎಂಬ ವಿಶ್ವಾಸವಿದೆ, ಈ ರೀತಿ ಮಹಿಳಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ತೊರೆಯುತ್ತಿರುವುದು ಅಸಾಮಾನ್ಯ ಬೆಳವಣಿಗೆ ಎನ್ನುತ್ತಾರೆ ಅವರು. 

ಟ್ಯಾಲೆಂಟ್‌ಆನ್‌ಲೀಸ್‌ನ ಸಂಸ್ಥಾಪಕ ದಯಾ ಪ್ರಕಾಶ್, ಲಿಂಗ ವೈವಿಧ್ಯತೆಯಲ್ಲಿ ಹೂಡಿಕೆ ಮಾಡುವುದು ಮತ್ತು ಅಂತರ್ಗತ ಕೆಲಸದ ವಾತಾವರಣವನ್ನು ಪೋಷಿಸುವುದು ಟೆಕ್ ಕಂಪನಿಗಳಿಗೆ ನೈತಿಕವಾಗಿ ಉತ್ತಮ ಮತ್ತು ಕಾರ್ಯತಂತ್ರವಾಗಿ ಕಡ್ಡಾಯವಾಗಿದೆ ಎಂದು ಹೇಳಿದರು. "ಏರುತ್ತಿರುವ ಆಟ್ರಿಷನ್ ದರಗಳು ಕಂಪೆನಿಗಳಿಗೆ ಪ್ರತಿಭಾವಂತರು ಸಿಗದಂತೆ ಮಾಡುತ್ತದೆ. ವೈವಿಧ್ಯಮಯ ದೃಷ್ಟಿಕೋನಗಳನ್ನು ಮಿತಿಗೊಳಿಸುತ್ತವೆ. ಒಟ್ಟಾರೆ ಯಶಸ್ಸಿಗೆ ಅಡ್ಡಿಯಾಗುತ್ತವೆ. ಮೇಲಾಗಿ, ಇದು ಉದ್ಯೋಗದಾತರ ಬ್ರ್ಯಾಂಡಿಂಗ್ ನ್ನು ಕಳಂಕಗೊಳಿಸುತ್ತದೆ, ಉನ್ನತ ಪ್ರತಿಭೆಗಳನ್ನು ಆಕರ್ಷಿಸುವುದು ಮತ್ತು ಉಳಿಸಿಕೊಳ್ಳುವುದು ಸವಾಲಾಗಿದೆ ಎಂದು ಹೇಳುತ್ತಾರೆ. 

ಐಟಿ ಕಂಪನಿಗಳು ಮಹಿಳೆಯರು ಎದುರಿಸುತ್ತಿರುವ ಹಲವು ಸವಾಲುಗಳನ್ನು ಪರಿಹರಿಸಬೇಕು. ಮಹಿಳಾ ಸಮುದಾಯದಲ್ಲಿ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಮಾದರಿಗಳ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರಬೇಕು ಎಂದು ಮಾನವ ಸಂಪನ್ಮೂಲ ತಜ್ಞರು ಹೇಳುತ್ತಾರೆ. 

ಮಹಿಳಾ ಉದ್ಯೋಗಿಗಳ ಕೌಶಲ/ತರಬೇತಿ ಮತ್ತು ಉದ್ಯಮಶೀಲತಾ ಮನೋಭಾವನೆಯನ್ನು ಬೆಳೆಸುವುದು ಸೇರಿದಂತೆ ಕೆಲಸ ಮಾಡುವ ಸಂಸ್ಥೆಗಳಲ್ಲಿ ಮಹಿಳಾ ಪೂರಕ ವಾತಾವರಣವನ್ನು ನಿರ್ಮಿಸುವುದು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


Post a Comment

Previous Post Next Post