ಶಾಲೆಯಲ್ಲಿ ಅನೈರ್ಮಲ್ಯ ವಾತಾವರಣದಿಂದಾಗಿ 22 ಮಂದಿ ಮಕ್ಕಳು, ಇಬ್ಬರು ಶಿಕ್ಷಕರು ಅಪರೂಪದ ಚರ್ಮದ ರೋಗಕ್ಕೊಳಗಾಗಿರುವ ಘಟನೆಯೊಂದು ತುಮಕೂರಿನಲ್ಲಿ ವರದಿಯಾಗಿದೆ.
ತುಮಕೂರು: ಶಾಲೆಯಲ್ಲಿ ಅನೈರ್ಮಲ್ಯ ವಾತಾವರಣದಿಂದಾಗಿ 22 ಮಂದಿ ಮಕ್ಕಳು, ಇಬ್ಬರು ಶಿಕ್ಷಕರು ಅಪರೂಪದ ಚರ್ಮದ ರೋಗಕ್ಕೊಳಗಾಗಿರುವ ಘಟನೆಯೊಂದು ತುಮಕೂರಿನಲ್ಲಿ ವರದಿಯಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 7ನೇ ತರಗತಿ ಓದುತ್ತಿರುವ ಎಂಟು ವಿದ್ಯಾರ್ಥಿನಿಯರು ಸೇರಿದಂತೆ 22 ಮಂದಿ ವಿದ್ಯಾರ್ಥಿಗಳು ಅಪರೂಪದ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ಪಾದದ ಅಡಿಭಾಗದಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಿದ್ದು, ಇದೀಗ ಇಬ್ಬರು ಶಿಕ್ಷಕರೂ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಅಶುದ್ಧ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಹಲವಾರು ವರ್ಷಗಳಿಂದ ಟ್ಯಾಂಕ್ ಸ್ವಚ್ಛಗೊಳಿಸದಿರುವುದೇ ಇದಕ್ಕೆ ಕಾರಣ. ಶಿಲೀಂಧ್ರಗಳಿಂದ ಸಮಸ್ಯೆ ಎದುರಾಗಿರಬಹುದು ಎಂದು ಶಾಲಾಭಿವೃದ್ಧಿ ಮತ್ತು ಆಡಳಿತ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷ ಕೆ.ಬಿ.ಶಿವಕುಮಾರ್ ಅವರು ಶಂಕಿಸಿದ್ದಾರೆ.
ಬಾಣಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೋಮಶೇಖರ್ ಮಾತನಾಡಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.
ಈ ನಡುವೆ ತುರುವೇಕೆರೆ ತಾಲೂಕು ಆಸ್ಪತ್ರೆಯ ಚರ್ಮ ತಜ್ಞೆ ಡಾ.ಮಧುಮತಿ ಗ್ರಾಮಕ್ಕೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಭೇಟಿ ಮಾಡಿ ತಪಾಸಣೆ ನಡೆಸಿದರು.
ಕೆಲವು ಕೀಟಗಳ ಕಡಿತದಿಂದಲೂ ಚರ್ಮದ ಸಮಸ್ಯೆ ಎದುರಾಗಿರಬಹುದು. ಶಾಲಾ ಆವರಣವನ್ನು ಸ್ವಚ್ಛಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ತಜ್ಞರಿಂದ ಎರಡನೇ ಅಭಿಪ್ರಾಯವನ್ನು ಕೇಳಲಾಗಿದೆ ಎಂದು ವೈದ್ಯೆ ಹೇಳಿದ್ದಾರೆ.
ಇದು ಅಪರೂಪದ ಚರ್ಮದ ಕಾಯಿಲೆಯಾಗಿದೆ. ಆದರೆ, ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯಿಲ್ಲ. ಏಕೆಂದರೆ ನಾಲ್ಕೈದು ದಿನಗಳಲ್ಲಿ ತಾನಾಗಿಯೇ ಹೋಗುತ್ತದೆ.
ಈ ಸಂಬಂಧ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಪ್ರಿಯಾ ಅವರು ಸಿಬ್ಬಂದಿಯೊಂದಿಗೆ ಸೋಮವಾರ ಗ್ರಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Post a Comment