ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಅಭೂತಪೂರ್ವ ಗೆಲುವು ಕಂಡಿರುವ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಬ್ಬರೂ ಕಣ್ಣಿಟ್ಟಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಅಭೂತಪೂರ್ವ ಗೆಲುವು ಕಂಡಿರುವ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಬ್ಬರೂ ಕಣ್ಣಿಟ್ಟಿದ್ದಾರೆ.
ಕಳೆದ ತಡರಾತ್ರಿಯವರೆಗೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP meeting) ಸಿಎಂ ಯಾರಾಗಬೇಕೆಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ ಚೆಂಡು ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬುಲಾವ್ ಬಂದಿದ್ದು ಇಂದು ಮಧ್ಯಾಹ್ನ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ದೆಹಲಿಗೆ ಹೋಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಲಿದ್ದಾರೆ.
ಎಐಸಿಸಿ ಮೂಲಗಳು ಐಎಎನ್ ಎಸ್ ಸುದ್ದಿಸಂಸ್ಥೆಗೆ ನೀಡಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯನವರು ನಿನ್ನೆ ಸಭೆಯಲ್ಲಿ 5 ವರ್ಷಗಳ ಅವಧಿಯಲ್ಲಿ ಶಿವಕುಮಾರ್ ಅವರೊಂದಿಗೆ ಸಿಎಂ ಹುದ್ದೆಯ ಅವಧಿಯನ್ನು ಹಂಚಿಕೊಳ್ಳಲು ಸಿದ್ಧರಿರುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಆರಂಭದಲ್ಲಿ ತಾವು ಮುಖ್ಯಮಂತ್ರಿಯಾಗಬೇಕಿದ್ದು, 2 ವರ್ಷಗಳ ನಂತರ ಅಧಿಕಾರ ಬಿಟ್ಟುಕೊಟ್ಟು ಮುಂದಿನ 3 ವರ್ಷಗಳಿಗೆ ಡಿ ಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಕೆಪಿಸಿಸಿ ಸಾರಥಿಯ ಹುಟ್ಟುಹಬ್ಬ: ಈ ಮಧ್ಯೆ ಇಂದು ಡಿ ಕೆ ಶಿವಕುಮಾರ್ ಗೆ ಹುಟ್ಟುಹಬ್ಬ ಸಂಭ್ರಮ. 61 ವರ್ಷಗಳನ್ನು ಪೂರೈಸಿ 62ನೇ ವಸಂತಕ್ಕೆ ಕಾಲಿಟ್ಟಿರುವ ಡಿ.ಕೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಸಿಎಂ ಯಾರಾಗಬೇಕೆಂದು ನಿರ್ಧಾರ ಮಾಡಲು ನಾವು ನಿರ್ಣಯವನ್ನು ಹೈಕಮಾಂಡ್ ಗೆ ಕಳುಹಿಸುತ್ತಿದ್ದು ಅವರು ನಿರ್ಧರಿಸುತ್ತಾರೆ. ದೆಹಲಿಗೆ ಹೋಗಬೇಕೆ ಬೇಡವೇ ಎಂದು ಇನ್ನೂ ನಿರ್ಧಾರ ಮಾಡಿಲ್ಲ. ನನ್ನ ಮನೆಗೆ ಹೋಗುತ್ತೇನೆ. ನನ್ನ ಬರ್ತ್ ಡೇಗೆ ಹೈಕಮಾಂಡ್ ಏನು ಗಿಫ್ಟ್ ಕೊಡುತ್ತದೆ ಎಂದು ಗೊತ್ತಿಲ್ಲ. ಆದರೆ ಕರ್ನಾಟಕ ಜನತೆ ಈ ಬಾರಿ 135 ಸಂಖ್ಯೆಯ ಗಿಫ್ಟ್ ನೀಡಿ ಗೆಲ್ಲಿಸಿದ್ದಾರೆ, ಇದಕ್ಕಿಂತ ದೊಡ್ಡ ಗಿಫ್ಟ್ ಏನು ಬೇಕು ಹೇಳಿ ಎಂದು ಕೇಳಿದ್ದಾರೆ.
ದೆಹಲಿಗೆ ಲಾಬಿ ಶಿಫ್ಟ್: ಸಿಎಂ ಆಯ್ಕೆ ಈಗ ದೆಹಲಿಯ ಅಂಗಳಕ್ಕೆ ಬಂದು ನಿಂತಿರುವುದರಿಂದ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ವೀಕ್ಷಕರು ದೆಹಲಿಗೆ ಪಯಣ: ನಿನ್ನೆ ರಾತ್ರಿ ಶಾಸಕಾಂಗ ಪಕ್ಷ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವೀಕ್ಷಕರು ದೆಹಲಿಗೆ ತೆರಳಿದ್ದು ವರದಿಯನ್ನು ಹೈಕಮಾಂಡ್ ಗೆ ಸಲ್ಲಿಸಲಿದ್ದಾರೆ.
ಇಂದು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್, ಗುಪ್ತ ಮತದಾನವನ್ನು ನಡೆಸಿ ಒಂದೇ ಸಾಲಿನ ನಿರ್ಣಯವನ್ನು ಅಂಗೀಕರಿಸಲಾಯಿತು. ವೀಕ್ಷಕರು ಸಹ ಪ್ರತಿ ಶಾಸಕರೊಂದಿಗೆ ಮಾತನಾಡಿದ್ದಾರೆ. ಅವರ ಅಭಿಪ್ರಾಯವನ್ನು ಮೌಖಿಕವಾಗಿ ಮತ್ತು ಲಿಖಿತವಾಗಿ ತೆಗೆದುಕೊಂಡಿದ್ದಾರೆ. ನಿರ್ಧಾರವನ್ನು ದೆಹಲಿಗೆ ಕಳುಹಿಸಲಾಗಿದ್ದು, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಎಐಸಿಸಿ ವೀಕ್ಷಕ ಬಾನ್ ವಾರ್ ಜಿತೇಂದ್ರ ಸಿಂಗ್ ಮಾತನಾಡಿ, ನಾವು ಎಲ್ಲ ಶಾಸಕರಿಂದ ಅಭಿಪ್ರಾಯಗಳನ್ನು ತೆಗೆದುಕೊಂಡಿದ್ದೇವೆ, ಸಭೆಯು 2 ಗಂಟೆಯವರೆಗೆ ನಡೆಯಿತು. ನಾವು ವರದಿ ಸಿದ್ಧಪಡಿಸಿದ್ದು, ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸುತ್ತೇವೆ ಎಂದಿದ್ದಾರೆ.
ಮೇ 18ಕ್ಕೆ ನೂತನ ಮುಖ್ಯಮಂತ್ರಿ?: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಪದವಿ ಸ್ವೀಕಾರ ಸಮಾರಂಭ ಮೇ 18ಕ್ಕೆ ನಡೆಯಲಿದ್ದು ಸಮಾನ ಮನಸ್ಕ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
Post a Comment