ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ನೀಡಲು ಮುಂದಾಗಿರುವ ಬಿಬಿಎಂಪಿ, ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ. ಇದರಂತೆ ಉಪಹಾರ ಮೆನುವನ್ನು ಸಿದ್ಧಪಡಿಸಿದೆ.
ಸಂಗ್ರಹ ಚಿತ್ರ
ಬೆಂಗಳೂರು: ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ನೀಡಲು ಮುಂದಾಗಿರುವ ಬಿಬಿಎಂಪಿ, ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ. ಇದರಂತೆ ಉಪಹಾರ ಮೆನುವನ್ನು ಸಿದ್ಧಪಡಿಸಿದೆ.
ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಮಾಹಿತಿ ನೀಡಿ, ಪ್ರತಿದಿನ ಮೆನು ಬದಲಾಗುತ್ತಲೇ ಇರುತ್ತದೆ. ಉಪಾಹಾರದ ಸಮಯದಲ್ಲಿ ಉಪ್ಪಿಟ್ಟು, ಕೇಸರಿ ಬಾತ್, ಬಿಸಿಬೇಳೆ ಬಾತ್, ಪೊಂಗಲ್. ಇಡ್ಲಿ ಮತ್ತು ಇತರ ಪದಾರ್ಥಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಉಪಹಾರದ ಪ್ರಮಾಣ ಹೆಚ್ಚಳ ಮಾಡಲಾಗುತ್ತಿದ್ದು, ವೆಚ್ಚದ ವಿವರಗಳು, ಟೆಂಡರ್ ಅನುಮೋದನೆ ಎಲ್ಲವನ್ನೂ ಸರ್ಕಾರಕ್ಕೆ ಕಳುಹಿಸಲಾಗುವುದು. ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಗಳನ್ನು ಪುನರಾರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರು ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಿಸಲು ಮುಂದಾಗಿದೆ.
ಕಳೆದ ರಾತ್ರಿಯಶಷ್ಟೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಯುಕ್ತರು, 175 ಇಂದಿರಾ ಕ್ಯಾಂಟೀನ್‌ಗಳ ಪೈಕಿ 163 ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಆರ್‌ಆರ್‌ನಗರ ವಲಯದಲ್ಲಿ ಆರು ಮತ್ತು ದಕ್ಷಿಣ ವಲಯದಲ್ಲಿ ಮೂರು ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಯುಕ್ತರು ಖಚಿತಪಡಿಸಿದ್ದಾರೆ.
ಇದೇ ವೇಳೆ ಇಂದಿರಾ ಕ್ಯಾಂಟೀನ್‌ಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವಂತೆ ವಲಯ ಆಯುಕ್ತರು ಮತ್ತು ಆರೋಗ್ಯಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೌರಕಾರ್ಮಿಕರನ್ನು ತೊಡಗಿಸಿಕೊಂಡು ಇಂದಿರಾ ಕ್ಯಾಂಟೀನ್‌ನ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವಂತೆ ಹಾಗೂ ವಾರ್ಡ್‌ಗಳ ಅನುಕೂಲಕ್ಕೆ ಅನುಗುಣವಾಗಿ ಮೊಬೈಲ್ ಕ್ಯಾಂಟೀನ್ ಅನ್ನು ಮರುನಿರ್ವಹಿಸುವಂತೆ ವಲಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ಗೆ ಬಂದು ತೃಪ್ತಿಯಿಂದ ಹೋಗಬೇಕೆಂಬುದು ನಮ್ಮ ಬಯಕೆ. ಗುಣಮಟ್ಟ, ಪ್ರಮಾಣ ಮತ್ತು ವೆಚ್ಚದ ಅಂಶವು ಇಲ್ಲಿ ಪ್ರಮುಖವಾಗುತ್ತದೆ. ಈ ಹಿಂದೆ ಬೆಳಗಿನ ಉಪಾಹಾರಕ್ಕೆ 5 ರೂ., ಮಧ್ಯಾಹ್ನದ ಊಟಕ್ಕೆ 10 ರೂ. ವಿಧಿಸಲಾಗುತ್ತಿತ್ತು. ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ದರಗಳು ಸ್ವಲ್ಪ ಬದಲಾಗಬಹುದು. ಮರು ಟೆಂಡರ್ ಕರೆಯಲು ಸಿದ್ಧತೆಗಳ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Post a Comment