ನಮ್ಮ ಷರತ್ತುಗಳಿಗೆ ಒಪ್ಪುವ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್'ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ನಮ್ಮ ಷರತ್ತುಗಳಿಗೆ ಒಪ್ಪುವ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್'ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.
ಸಿಂಗಾಪುರಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಾರಸ್ವಾಮಿಯವರು, 50 ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇದೆ. ಈ ಬಾರಿ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೇವೆಂದು ಹೇಳಿದ್ದಾರೆ.
ಹಲವು ಸಮೀಕ್ಷೆಗಳು ಜೆಡಿಎಸ್ ಪಕ್ಷ ಬಹಳ ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಹೇಳಿವೆ. ಆದರೆ, ನಮ್ಮ ಪಕ್ಷ 50 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ಬಾರಿ ನನ್ನ ಷರತ್ತುಗಳನ್ನು ಈಡೇರಿಸಲು ಒಪ್ಪುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರಗಳ ಅಡಿಯಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದಾಗ, ಒಮ್ಮೆ ಬಿಜೆಪಿ (2006) ಮತ್ತು ನಂತರ ಕಾಂಗ್ರೆಸ್ (2018) ನೊಂದಿಗೆ ಕುಮಾರಸ್ವಾಮಿ ಅವರು ಎದುರಿಸಿದ ಬಿಕ್ಕಟ್ಟುಗಳಿಂದಾಗಿ ಕುಮಾರಸ್ವಾಮಿ ಅವರು ಈ ಬಾರಿ ದಿಟ್ಟ ನಿಲುವನ್ನು ಹೊಂದಿದ್ದಾರೆ.
ಹೀಗಾಗಿ ಈ ಬಾರಿ ಮೈತ್ರಿಗೆ ಸಹಿ ಹಾಕುವ ಮೊದಲು ಅವರ ಕೆಲವು ಷರತ್ತುಗಳನ್ನು ವಿಧಿಸಲು ಮುಂದಾಗಿದ್ದಾರೆ.
ಸರ್ಕಾರವನ್ನು ನಡೆಸಲು ಸ್ವತಂತ್ರ ನೀಡುವುದು, ಯಾರ ಅಪ್ಪಣೆಯೂ ತೆಗೆದುಕೊಳ್ಳುವಂತಿರಬಾರದು, ಯಾರು ಹಿಡಿತಸಾಧಿಸಬಾರದು ಎಂಬುದು ಕುಮಾರಸ್ವಾಮಿಯವರ ಷರತ್ತುಗಳಾಗಿವೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಶಾಸಕರು ಜಲಸಂಪನ್ಮೂಲ, ವಿದ್ಯುತ್ ಮತ್ತು ಸಾರ್ವಜನಿಕ ಕೆಲಸಗಳಂತಹ ಖಾತೆಗಳನ್ನು ಪಡೆಯಬೇಕೆಂದು, ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಸಮ್ಮಿಶ್ರ ಪಕ್ಷದ ಪಾಲುದಾರರು ಅವಕಾಶ ನೀಡಬೇಕು. ತಮ್ಮ ಸಮ್ಮಿಶ್ರ ಪಾಲುದಾರ ಪಕ್ಷವು ಮಂಡ್ಯ ಮತ್ತು ಹಾಸನ ಕ್ಷೇತ್ರಗಳಿಂದ ದೂರವಿರಬೇಕು. ಯಾವುದೇ ಸಿದ್ಧಾಂತಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಚರ್ಚೆಯಿಲ್ಲದೆ ಮಾಡಬಾರದು ಎಂಬ ಷರತ್ತುಗಳನ್ನು ಮುಂದಿಟ್ಟಿದ್ದಾರೆಂದು ತಿಳಿದುಬಂದಿದೆ.
Post a Comment