ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಐಸಿಸಿ ಸಂವಹನ ಮುಖ್ಯಸ್ಥ ಪವನ್ ಖೇರಾ, 'ಪರಿಣಾಮವನ್ನು ನಿರ್ಣಯಿಸಲು ಆಂತರಿಕ ಸಮೀಕ್ಷೆ ಪ್ರಗತಿಯಲ್ಲಿದೆ ಮತ್ತು ವರದಿಗಾಗಿ ಕಾಯಲಾಗುತ್ತಿದೆ ಎಂದರು.
ಕಾಂಗ್ರೆಸ್
ಬೆಂಗಳೂರು: ಅಧಿಕಾರಕ್ಕೆ ಬಂದರೆ ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಕಾಂಗ್ರೆಸ್, ಬಿಜೆಪಿಯಿಂದ ತೀವ್ರ ಟೀಕೆಯನ್ನು ಎದುರಿಸಿತು. ಇದೀಗ, ಈ ಭರವಸೆಯಿಂದಾಗಿ ಪಕ್ಷದ ಮೇಲೆ ಉಂಟಾಗಿರುವ ಹಾನಿ ನಿಯಂತ್ರಣಕ್ಕೆ ಕ್ರಮಕೈಗೊಂಡಿದೆ. ರಾಜ್ಯದಲ್ಲಿ, ಈ ಭರವಸೆಯಿಂದಾಗಿ ಉಂಟಾಗಿರುವ ಪರಿಣಾಮವನ್ನು ನಿರ್ಣಯಿಸಲು ಸಮೀಕ್ಷೆಯನ್ನು ಕೈಗೆತ್ತಿಕೊಂಡಿದೆ.
ಕೆಲವು ಕೇಂದ್ರ ಕಾಂಗ್ರೆಸ್ ನಾಯಕರ ಪ್ರಕಾರ, ಇದು ಸೈದ್ಧಾಂತಿಕ ವಿಷಯದ ಮೇಲೆ ನಿರೂಪಣೆಯನ್ನು ಹೊಂದಿಸುವ ಮತ್ತು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಧರ್ಮದ ರಾಜಕೀಯಕ್ಕೆ ಸೀಮಿತಗೊಳಿಸುವ ಉದ್ದೇಶಪೂರ್ವಕ ಕ್ರಮವಾಗಿದೆ.
ಆದರೆ, ಕಾಂಗ್ರೆಸ್‌ನ ಅನೇಕರು ಇದು ಬುದ್ಧಿವಂತ ನಡೆಯಲ್ಲ ಎಂದು ಭಾವಿಸಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದ ಕಾಂಗ್ರೆಸ್ ಅಭ್ಯರ್ಥಿಗಳು ಈ ವಿವಾದ ಉಂಟಾಗುತ್ತಿದ್ದಂತೆಯೇ ಅಲುಗಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವ ಎಂ ವೀರಪ್ಪ ಮೊಯ್ಲಿ ಅವರು, ರಾಜ್ಯ ಸರ್ಕಾರವು ಸಂಘಟನೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಮತ್ತು ಕಾಂಗ್ರೆಸ್ ಪ್ರಣಾಳಿಕೆಯ ಅರ್ಥವೂ ಅದಲ್ಲ ಎಂದು ಸ್ಪಷ್ಟಪಡಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಪ್ರಣಾಳಿಕೆಯು ನಿಖರವಾಗಿ ಬಜರಂಗದಳವನ್ನು ನಿಷೇಧಿಸುವ ಅರ್ಥವಲ್ಲ. ಆದರೆ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಉಲ್ಲಂಘಿಸುವ ಅಂತಹ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಕ್ಷದ ಅಭ್ಯರ್ಥಿಗಳಿಗೂ, ಇದೇ ರೀತಿಯಲ್ಲಿ ಮಾತನಾಡುವಂತೆ ಮತ್ತು ಪ್ರಣಾಳಿಕೆಯು ಸಮಾಜದಲ್ಲಿ ಶಾಂತಿ ಕದಡುವ ಅಂಶಗಳ ನಿಷೇಧವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ ಮತ್ತು ಗೋವಾದಲ್ಲಿ ಶ್ರೀರಾಮ ಸೇನೆಯನ್ನು ನಿಷೇಧಿಸಿದ ಪರಿಕ್ಕರ್ ಸರ್ಕಾರವನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. '40 ಪರ್ಸೆಂಟ್ ಕಮಿಷನ್' ಅಭಿಯಾನದಿಂದ ಗಳಿಸಿದ ಪ್ರಯೋಜನವನ್ನು ಪಕ್ಷದ ಪರವಾಗಿ ಮಾಡಿಕೊಳ್ಳಲು ನಾಯಕರಿಗೆ ಸಲಹೆ ನೀಡಲಾಗಿದೆ ಎಂದು ಮೂಲಗಳು ಟಿಎನ್ಐಇಗೆ ತಿಳಿಸಿವೆ.
ಕಾಂಗ್ರೆಸ್‌ನ ಈ ನಡೆಯಿಂದಾಗಿ ಕನಿಷ್ಠ ಪಕ್ಷ ಭಜರಂಗದಳ ಮತ್ತು ಹಿಂದೂಪರ ಕಾರ್ಯಕರ್ತರು ಸಕ್ರಿಯವಾಗಿರುವ 9-10 ವಿಧಾನಸಭಾ ಕ್ಷೇತ್ರಗಳಲ್ಲಿ ಈ ವಿಷಯ ಪಕ್ಷಕ್ಕೆ ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಬಿಜೆಪಿ ವಲಯಗಳು ಭಾವಿಸಿವೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಐಸಿಸಿ ಸಂವಹನ ಮುಖ್ಯಸ್ಥ ಪವನ್ ಖೇರಾ, 'ಪರಿಣಾಮವನ್ನು ನಿರ್ಣಯಿಸಲು ಆಂತರಿಕ ಸಮೀಕ್ಷೆ ಪ್ರಗತಿಯಲ್ಲಿದೆ ಮತ್ತು ವರದಿಗಾಗಿ ಕಾಯಲಾಗುತ್ತಿದೆ ಎಂದರು.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಜರಂಗದಳದಂತಹ ಸಂಘಟನೆಗಳ ಮೇಲೆ ಇಂತಹ ನಿರ್ಧಾರ ಕೈಗೊಳ್ಳಲು ಧೈರ್ಯ ಬೇಕು ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಹೇಳಿದ್ದು, ಪಕ್ಷದ ಪ್ರಣಾಳಿಕೆಯ ಭರವಸೆಯ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ.
Post a Comment