ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳಕ್ಕೆ ನಿಷೇಧ ಹೇರುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ತಿರುಗೇಟು ನೀಡಿದ್ದಾರೆ.
ಹನುಮಾನ್ ಚಾಲೀಸಾ ಪಠಿಸುತ್ತಿರುವ ಸಿಎಂ ಬೊಮ್ಮಾಯಿ.ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳಕ್ಕೆ ನಿಷೇಧ ಹೇರುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹನುಮಾನ್ ಚಾಲೀಸಾ ಪಠಿಸಿದ್ದಾರೆ.
ಸಾವಿರಾರು ಅಭಿಯಾನಿಗಳು, ಪಕ್ಷದ ಕಾರ್ಯಕರ್ತರ ಜೊತೆಗೂಡಿ ಆಂಜನೇಯ ದೇವರ ಮುಖ್ಯಮಂತ್ರಿಗಳು ಭಕ್ತಿಯಿಂದ ಹನುಮಾನ್ ಚಾಲೀಸಾ ಪಠಿಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿಗಳೊಂದಿಗೆ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ್, ಪಾಲಿಕೆ ಸದಸ್ಯ ಸಂತೋಷ ಸೇರಿದಂತೆ ಸ್ಥಳೀಯ ನಿವಾಸಿಗಳು ಸಾಥ್ ನೀಡಿದ್ದು ಕಂಡು ಬಂದಿತು.
ಈ ನಡುವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡ ಬೆಂಗಳೂರಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಶ್ರೀಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹನುಮಾನ್ ಚಾಲೀಸಾ ಪಠಿಸಿದರು.
ಈ ವೇಳೆ ಶೋಭಾ ಅವರಿಗೆ ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ, ಉಪಮೇಯರ್ ಎಸ್.ಹರೀಶ್, ನಟಿ ಮಾಳವಿಕಾ ಅವಿನಾಶ್, ಬಿಜೆಪಿ ಮಹಿಳಾ ಕಾರ್ಯಕರ್ತರು ಸಾಥ್ ನೀಡಿದ್ದು ಕಂಡು ಬಂದಿತು.
ಹನುಮಾನ್ ಚಾಲೀಸಾ ಪಠನೆ ನಿಲ್ಲಿಸಿ: ವಿಹೆಚ್'ಪಿಗೆ ಚುನಾವಣಾ ಆಯೋಗ ಸೂಚನೆ
ಈ ನಡುವೆ ಹನುಮಾನ್ ಚಾಲೀಸ್ ಪಠನೆ ಮಾಡದಂತೆ ವಿಹೆಚ್'ಪಿಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಹನುಮಾನ್ ಚಾಲೀಸಾ ಪಠನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರದ ದೇವಾಲಯದಲ್ಲಿ 5ಕ್ಕೂ ಹೆಚ್ಚು ಮಂದಿ ಒಮ್ಮೆಲೆ ಸೇರುತ್ತಿದ್ದು, ಹನುಮಾನ್ ಚಾಲೀಸಾ ಪಠನೆ ನಿಲ್ಲಿಸುವಂತೆ ವಿಹೆಚ್'ಪಿಗೆ ಸೂಚನೆ ನೀಡಿದೆ. ಒಂದು ವೇಳೆ ಆದೇಶ ತಿರಸ್ಕರಿಸಿದ್ದೇ ಆದರೆ, ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿತ್ತು. ಕಾಂಗ್ರೆಸ್ ಪಕ್ಷ ಈ ಭರವಸೆ ಬಿಜೆಪಿ ನಾಯಕರ ಹಾಗೂ ಹಿಂದು ಸಂಘಟನೆಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಹೀಗಾಗಿ ಕಾಂಗ್ರೆಸ್ ವಿರುದ್ಧ ರಾಜ್ಯದಾದ್ಯಂತ ಹನುಮಾನ್ ಚಾಲೀಸಾ ಪಠಣಕ್ಕೆ ಹಿಂದೂಪರ ಸಂಘಟನೆಗಳು ಕರೆ ನೀಡಲಾಗಿದ್ದು, ಅದರಂತೆ ಕಳೆದ ಗುರುವಾರ(ಮೇ 04)ದಿಂದ ರಾಜ್ಯದ ವಿವಿಧ ದೇವಾಲಯಗಲ್ಲಿ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸಲಾಗುತ್ತಿದೆ.
Post a Comment