ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಎರಡನೇ ಬಾರಿಗೆ ಅಹಿಂದ ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿದ್ದಾರೆ.
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
ನವದೆಹಲಿ/ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಎರಡನೇ ಬಾರಿಗೆ ಅಹಿಂದ ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿದ್ದಾರೆ.
ಕಳೆದ ರಾತ್ರಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರ ಜೊತೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬಂದು ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿ ಎಂದು ಮಲ್ಲಿಕಾರ್ಜುನ ಖರ್ಗೆಯವರು ತೀರ್ಮಾನಿಸಿದರು. ಪಟ್ಟು ಬಿಡದೆ ಹಠ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಹ ಹೈಕಮಾಂಡ್ ತೀರ್ಮಾನಕ್ಕೆ ಒಪ್ಪಿಕೊಂಡಿದ್ದಾರೆ.
ಆರಂಭದ ಎರಡೂವರೆ ವರ್ಷ ಸಿದ್ದರಾಮಯ್ಯ ಮತ್ತು ಉಳಿದ ಎರಡೂವರೆ ವರ್ಷ ಡಿ ಕೆ ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸಿ ಎಂದು ಮಲ್ಲಿಕಾರ್ಜುನ ಖರ್ಗೆಯವರು ಸೂಚಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಡಿ ಕೆ ಶಿವಕುಮಾರ್ ಗೆ ಉಪ ಮುಖ್ಯಮಂತ್ರಿ ಪಟ್ಟ: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಬೀರಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತ ಡಿ ಕೆ ಶಿವಕುಮಾರ್ ಹೈಕಮಾಂಡ್ ನ ಸೂತ್ರಕ್ಕೆ ಬಗ್ಗಿದ್ದು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ವೇಣುಗೋಪಾಲ್ ನಿವಾಸದಲ್ಲಿ ಉಪಾಹಾರ ಕೂಟ: ಕರ್ನಾಟಕದ ಮಾಜಿ ಕಾಂಗ್ರೆಸ್ ಉಸ್ತುವಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ನಿವಾಸದಲ್ಲಿ ಇಂದು ಬೆಳಗ್ಗೆ ಉಪಾಹಾರ ಕೂಟ ಏರ್ಪಡಿಸಲಾಗಿದ್ದು ಅದರಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಸಹ ಭಾಗವಹಿಸಲಿದ್ದಾರೆ.
ಶನಿವಾರ ಪ್ರಮಾಣವಚನ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಸಿದ್ದರಾಮಯ್ಯನವರು ಇದೇ ಶನಿವಾರ ಮೇ 20ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೇ 20 ಶನಿವಾರ ಮಧ್ಯಾಹ್ನ 12.30ಕ್ಕೆ ಪದಗ್ರಹಣ ನಡೆಯಲಿದೆ ಅದಕ್ಕೆ ಭರದ ಸಿದ್ಧತೆ ಆರಂಭವಾಗಿದೆ.
ಸಿದ್ದರಾಮಯ್ಯ ನಿವಾಸದ ಹೊರಗೆ ಬಿಗಿ ಭದ್ರತೆ: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ವರದಿ ಬರುತ್ತಿದ್ದಂತೆ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಅವರ ಹುಟ್ಟೂರು ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಜನರ ಹರ್ಷೋದ್ಘಾರ ಮುಗಿಲುಮುಟ್ಟಿದೆ. ಬೆಂಗಳೂರಿನಲ್ಲಿರುವ ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಅವರ ನಿವಾಸದ ಸುತ್ತಮುತ್ತ ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿವೆ.
ಇಂದು ಸಂಜೆ ಸಿಎಲ್ ಪಿ ಮೀಟಿಂಗ್: ನೂತನ ಮುಖ್ಯಮಂತ್ರಿ ಆಯ್ಕೆಯಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ಕಳೆದ 5 ದಿನಗಳಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಇಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ. ವಿಧಾನಸಭೆ, ಪರಿಷತ್, ಕಾಂಗ್ರೆಸ್ ಸಂಸದರನ್ನು ಬೆಂಗಳೂರು ಕ್ವೀನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ನಡೆಯುವ ಸಭೆಗೆ ಡಿಕೆಶಿ ಆಹ್ವಾನಿಸಿದ್ದಾರೆ.
Post a Comment