ಬಿಜೆಪಿಯ ಮತ್ತೊಂದು ವಿಕೆಟ್ ಪತನ: ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್

 ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಈಗಾಗಲೇ ಬಿಜೆಪಿಯ ಇಬ್ಬರು ಹಾಲಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದರ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದೆ.

                                                             ಆಯನೂರು ಮಂಜುನಾಥ್

By : Rekha.M
Online Desk

ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಈಗಾಗಲೇ ಬಿಜೆಪಿಯ ಇಬ್ಬರು ಹಾಲಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದರ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದೆ.

ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಚೆಯಿಂದ ಸಾರ್ವತ್ರಿಕವಾಗಿ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲೂ ನನ್ನ ವಿನಂತಿ ಮಾಡಿಕೊಂಡಿದ್ದೇನೆ. ಆದರೆ, ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇನೆಂದು ಹೇಳಿದ್ದಾರೆ.

ಮೊನ್ನೆ ಈಶ್ವರಪ್ಪ‌ ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ. ಈಶ್ವರಪ್ಪ ಅವರ ಏಕವಚನ ಪ್ರಯೋಗ ಅವರ ಶಿಕ್ಷಣದ ಮಟ್ಟ ತೋರಿಸುತ್ತಿದೆ.ಈಶ್ವರಪ್ಪ ನಾಲಿಗೆ ಮೇಲೆ‌ ಹಿಡಿತ ಇಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. 'ನನಗೆ ಅವನದ್ಯಾವ ಲೆಕ್ಕ' ಎಂದು ಈಶ್ವರಪ್ಪ ಹೇಳಿದ್ದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದ್ದಾರೆ.

ಈಶ್ವರಪ್ಪ ಅವರಿಗೆ ಇನ್ನು ಲೆಕ್ಕ ಕೊಡಲು ಆರಂಭಿಸುತ್ತೇನೆ. ಈಶ್ವರಪ್ಪರ ಚುನಾವಣೆಯ ತಂತ್ರಗಳನ್ನು ಅರಿತಿದ್ದೇನೆ. ಶಿವಮೊಗ್ಗದಲ್ಲಿ ಮೊನ್ನೆ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿಬಿದ್ದಿದೆ. ಒಬ್ಬ 1.50 ಕೋಟಿ ರೂ ಕೊಂಡೊಯ್ಯುವಾಗ ಸಿಕ್ಕಿಬಿದ್ದಿದ್ದಾನೆ. ಈಶ್ವರಪ್ಪ‌ ಅವರ ಬಳಿ ಅಪಾರ ದುಡ್ಡಿದೆ. ಚುನಾವಣೆಗಾಗಿ ವಾರ್ಡ್ ಗಳಲ್ಲಿ ಹಣ ಡಿಪಾಸಿಟ್ ಇಟ್ಟಿದ್ದೀರಿ ಎಂಬುದೂ ಗೊತ್ತಿದೆ. ಆದರೆ ಈ ಸಲ ನಿಮ್ಮ ಹಣ ಲೆಕ್ಕಕ್ಕೆ ಇಲ್ಲ ಎಂಬುದನ್ನು ತೋರಿಸುತ್ತೇನೆಂದು ಸವಾಲು ಹಾಕಿದರು.

32 ವರ್ಷಗಳ ಅಧಿಕಾರಾವಧಿಯಲ್ಲಿ ಕೆ.ಎಸ್.ಈಶ್ವರಪ್ಪ ಮಾಡಿದ್ದು ಏನೂ ಇಲ್ಲ. ಅಲ್ಲೊಂದು ಕಡೆ ಇಲ್ಲೊಂದು ಕಡೆ ಪ್ರಚೋದನಾತ್ಮಕ ಭಾಷಣ ಮಾಡಿ ಗಲಭೆ ಮಾಡಿಸಿ ಚುನಾವಣೆ ಮಾಡುತ್ತೀರಿ. ಈ ಬಾರಿ ಅದು ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.

ದೇವಸ್ಥಾನ, ಪ್ರಾರ್ಥನಾ ಮಂದಿರ ಮಲಿನವಾಗಬಹುದು, ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟವರೇ ಇಂತಹ ಕೃತ್ಯ ಎಸಗುವ ಸಾಧ್ಯತೆ ಇದೆ. ಆದರೆ, ಯಾರೂ ಸಂಯಮ ಕಳೆದುಕೊಳ್ಳಬಾರದು. ಪೊಲೀಸರು ಮೈಮರೆಯಬಾರದು. ಚುನಾವಣೆ ವೇಳೆ ಒಂದೆರಡು ಘಟನೆಗಳು ನಡೆಯುವ ಸಾಧ್ಯತೆಯಿದ್ದು, ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ಹೇಳಿದರು.


Post a Comment

Previous Post Next Post