'ಮಾಡಾಳ್ ವಿರೂಪಾಕ್ಷಪ್ಪ ಹುಟ್ಟುತ್ತಲೇ ಆಗರ್ಭ ಶ್ರೀಮಂತರು, ಇದು ಕಾಂಗ್ರೆಸ್ ಷಡ್ಯಂತ್ರ': ಬೆಂಬಲಿಗರ ವಾದ, ಇಂದು ಜಾಮೀನು ಭವಿಷ್ಯ ನಿರ್ಧಾರ, ತನಿಖಾಧಿಕಾರಿಗಳ ಬದಲಾವಣೆ

 ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್​​​​​ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಜೈಲುಪಾಲಾಗಿರುವಾಗಲೇ ಇಂದು ಅವರ ಜಾಮೀನು ಭವಿಷ್ಯ ಹೈಕೋರ್ಟ್ ನಲ್ಲಿ ನಿರ್ಧಾರವಾಗಲಿದೆ.

                            ಮಾಡಾಳ್ ವಿರೂಪಾಕ್ಷಪ್ಪ ಮತ್ತು ಮಾಡಾಳ್ ಪ್ರಶಾಂತ್(ಸಂಗ್ರಹ ಚಿತ್ರ)

By : Rekha.M
Online Desk

ಬೆಂಗಳೂರು : ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್​​​​​ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಜೈಲುಪಾಲಾಗಿರುವಾಗಲೇ ಇಂದು ಅವರ ಜಾಮೀನು ಭವಿಷ್ಯ ಹೈಕೋರ್ಟ್ ನಲ್ಲಿ ನಿರ್ಧಾರವಾಗಲಿದೆ. ಅವರ ನಿವಾಸ ಮತ್ತು ಕಚೇರಿಯಲ್ಲಿ ಸಿಕ್ಕಿದ 8 ಕೋಟಿಗೂ ಅಧಿಕ ಲೆಕ್ಕ ಸಿಗದ ಹಣದ ಹಿನ್ನೆಲೆಯಲ್ಲಿ ಶಾಸಕ ಮತ್ತು ಅವರ ಪುತ್ರನ ವಿರುದ್ಧ ಕೇಸು ದಾಖಲಾಗಿದೆ.

ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ನಾಪತ್ತೆಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹುಡುಕಾಟ ಮುಂದುವರಿದಿದ್ದು, ಅಜ್ಞಾತ ಸ್ಥಳದಲ್ಲಿಯೇ ಕುಳಿತು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪುತ್ರ ಪ್ರಶಾಂತ್​​​​​ ಟ್ರ್ಯಾಪ್​​ ಕೇಸ್​ನಲ್ಲಿ ಅಪ್ಪನಿಗೆ ಅರೆಸ್ಟ್ ಸಂಕಷ್ಟ ಎದುರಾಗಿದ್ದು, ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. 

ಇಂದು ಜಾಮೀನು ಅರ್ಜಿ ಭವಿಷ್ಯಹೈಕೋರ್ಟ್​ನಲ್ಲಿ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಲಾಗುತ್ತದೆ. ನಿರೀಕ್ಷಣಾ ಜಾಮೀನು ಹಾಗು FIR ರದ್ದು ಕೋರಿ ವಿರೂಪಾಕ್ಷಪ್ಪ ಅರ್ಜಿ ಸಲ್ಲಿಸಿದ್ದಾರೆ. ಮಾಡಾಳ್ ಪುತ್ರನ ಕೇಸ್ ಲೋಕಾಯುಕ್ತಕ್ಕೆ ಪ್ರತಿಷ್ಠಿತ ಕಣವಾಗಿದೆ. 

ಪ್ರಕರಣದ A-1 ಆರೋಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆಗಿದ್ದಾರೆ. ವಿರೂಪಾಕ್ಷಪ್ಪ ಪರ ಸುಪ್ರೀಂಕೋರ್ಟ್ ವಕೀಲ ಸಂದೀಪ್ ಪಾಟೀಲ್ ವಾದ ಮಾಡಲಿದ್ದಾರೆ. ಲೋಕಾಯುಕ್ತ ಪರ SPP ಬಿ.ಬಿ‌ ಪಾಟೀಲ್ ಪ್ರತಿವಾದ ನಡೆಸಲಿದ್ದಾರೆ. ಈಗಾಗಲೇ ವಿರೂಪಾಕ್ಷಪ್ಪಗೆ CRPC -41(A)ರಡಿ ಲೋಕಾ ನೋಟಿಸ್  ನೀಡಿದೆ. ವಿರೂಪಾಕ್ಷಪ್ಪಗೆ ಬೇಲ್​​ ನೀಡದಂತೆ ಪ್ರಬಲ ವಾದಕ್ಕೆ ಲೋಕಾ ತಯಾರಿ ನಡೆಸಿದೆ. ಮಾಡಾಳ್ ಪರ ವಕೀಲರು ತುರ್ತು ವಿಚಾರಣೆ ನಡೆಸಲು ಅರ್ಜಿ ಸಲ್ಲಿಸಿದ್ದಾರೆ.  ಮಾಡಾಳ್ ವಿರೂಪಾಕ್ಷಪ್ಪಗೆ  8.12 ಕೋಟಿ ಅಕ್ರಮ ಹಣ ಮುಳುವಾಗಲಿದೆ. 

ತನಿಖಾಧಿಕಾರಿಗಳ ಬದಲಾವಣೆ: ಮಾಡಾಳ್​​​ ಪುತ್ರ ಪ್ರಶಾಂತ್​ ಟ್ರ್ಯಾಪ್​​ ಪ್ರಕರಣದಲ್ಲಿ ತನಿಖಾಧಿಕಾರಿಗಳ ಬದಲಾವಣೆಯಾಗಿದೆ. ಟ್ರ್ಯಾಪ್​​ ತನಿಖಾಧಿಕಾರಿಗಳಿಬ್ಬರ ಬದಲಾವಣೆ ಮಾಡಲಾಗಿದೆ. ಡಿವೈಎಸ್ಪಿ ಪ್ರಮೋದ್​ ಕುಮಾರ್​​, ಇನ್ಸ್​ಪೆಕ್ಟರ್​​​​​​​​ ಕುಮಾರಸ್ವಾಮಿ ಚೇಂಜ್​​ ಆಗಿದ್ದು, ನೂತನ ತನಿಖಾಧಿಕಾರಿಯಾಗಿ ಡಿವೈಎಸ್ಪಿ ಆಂಥೋಣಿ ಜಾನ್​​​​, ಇನ್ಸ್​ಪೆಕ್ಟರ್​​​​ ಬಾಲಾಜಿಬಾಬು ತನಿಖಾಧಿಕಾರಿಗಳಾಗಿ ನೇಮಕವಾಗಿದ್ದಾರೆ. ತನಿಖಾಧಿಕಾರಿಗಳ ಬದಲಾವಣೆ ಭಾರೀ ಕುತೂಹಲ ಕೆರಳಿಸಿದೆ.

ವಿರೂಪಾಕ್ಷಪ್ಪ ಹುಟ್ಟಾ ಆಗರ್ಭ ಶ್ರೀಮಂತ: ಈ ಮಧ್ಯೆ ದಾವಣಗೆರೆಯ ಚನ್ನಗಿರಿಯಲ್ಲಿ ವಿರೂಪಾಕ್ಷಪ್ಪನವರ ಬೆಂಬಲಿಗರ ಪ್ರತಿಭಟನೆ, ತಮ್ಮ ನಾಯಕನನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಲಂಚ, ಭ್ರಷ್ಟಾಚಾರ ಪ್ರಕರಣದಲ್ಲಿ ಮಾಡಾಳ್ ಸಿಲುಕಿರುವುದರಿಂದ ಚನ್ನಗಿರಿಯಲ್ಲಿ ಈ ಬಾರಿ ಬಿಜೆಪಿಯ ಟಿಕೆಟ್ ಕೈತಪ್ಪಿ ಬೇರೆಯವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

ಮಾಡಾಳ್​​ಗೆ ಟಿಕೆಟ್​ ತಪ್ಪುತ್ತೆ ಎನ್ನುವ ಹಿನ್ನೆಲೆಯಲ್ಲಿ ನಿನ್ನೆಯಿಂದ ಕ್ಷೇತ್ರದಲ್ಲಿ ಬೆಂಬಲಿಗರು ಮಹತ್ವದ ಸಭೆ ನಡೆಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಹಾಗೂ ಮಾಡಾಳ್​​ ಅಭಿಮಾನಿಗಳೂ ನಿನ್ನೆ ಭಾಗಿಯಾಗಿದ್ದರು.  ಚನ್ನಗಿರಿ ಬಿಜೆಪಿ ಕಚೇರಿಯಲ್ಲಿ ನಿನ್ನೆ ನಡೆದಿರುವ ಸಭೆಯಾಗಿದೆ. ಮಾಡಾಳ್​ ಪರ ನಿಲ್ಲಬೇಕು ಎಂದು ಕೆಲವು ಬೆಂಬಲಿಗರು ವಾದ ನಡೆಸಿದ್ದಾರೆ.

ಎಲೆಕ್ಷನ್​​​​ ಹೊತ್ತಿನಲ್ಲಿ ಸಂಕಷ್ಟಕ್ಕೆ ಮಾಡಾಳ್​​​ ಸಿಲುಕಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಹುಟ್ಟುತ್ತಲೇ ಆಗರ್ಭ ಶ್ರೀಮಂತರು, ಅಡಿಕೆ ಸೇರಿದಂತೆ ಹಲವಾರು ವ್ಯವಹಾರಗಳಿವೆ, ಇದು ಕಾಂಗ್ರೆಸ್ ಷಡ್ಯಂತ್ರ ಎಂದು ಕೆಲವು ಬೆಂಬಲಿಗರ ವಾದ ನಡೆಸಿದ್ದಾರೆ.

ಮತ್ತೊಂದು ಕಡೆ ಮಾಡಾಳ್​​ಗೆ ಟಿಕೆಟ್​ ತಪ್ಪಿದರೆ ಕಣಕ್ಕಿಳಿಯಲು ಕೆಲವರ ತಯಾರಿ ನಡೆಸಿದ್ದು,  ಸ್ಥಳೀಯ ಮುಖಂಡರು ಈಗಾಗಲೇ ಕ್ಷೇತ್ರದ ಹಲವು ಭಾಗದಲ್ಲಿ ಸಂಚರಿಸುತ್ತಿದ್ದಾರೆ.  ಚನ್ನಗಿರಿ ಬಿಜೆಪಿ ಟಿಕೆಟ್​ ಭಾರೀ ಕುತೂಹಲಕ್ಕೆ ಕಾರಣವಾಗುತ್ತಿದೆ.


    Post a Comment

    Previous Post Next Post