ಕೋರ್ಟ್‌ ಆವರಣದಲ್ಲೇ ಹೆಂಡತಿ ಮೇಲೆ ಆಸಿಡ್ ದಾಳಿ ನಡೆಸಿದ ಗಂಡ!

 ಕೊಯಮತ್ತೂರು (ತಮಿಳುನಾಡು): ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. ಗಂಡನ ವಿರುದ್ಧ ಸಂತ್ರಸ್ತ ಮಹಿಳೆ ಕೇಸ್ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆಗೆ ಕೋರ್ಟ್‌ನಲ್ಲಿ ದಿನಾಂಕ ನಿಗದಿ ಆಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಗಂಡ ಹಾಗೂ ಹೆಂಡತಿ ಇಬ್ಬರೂ ಬಂದಿದ್ದರು. ನ್ಯಾಯಾಧೀಶರು ಇನ್ನೇನು ಕೋರ್ಟ್‌ ಕಲಾಪಕ್ಕೆ ಆಗಮಿಸಬೇಕು ಎನ್ನುವಷ್ಟರಲ್ಲಿ ತನ್ನ ಬಳಿ ಇದ್ದ ಆಸಿಡ್ ತುಂಬಿದ್ದ ಬಾಟಲ್ ತೆಗೆದ ಗಂಡ, ಹೆಂಡತಿ ಮೇಲೆ ಎರಚಿದ್ದಾನೆ.

ಕೋರ್ಟ್‌ ಆವರಣದಲ್ಲೇ ನಡೆದ ಈ ಘಟನೆಯಿಂದಾಗಿ ನ್ಯಾಯಾಲಯದ ಕಲಾಪಕ್ಕೆ ಆಗಮಿಸಿದ್ದ ವಕೀಲರು, ಸಾಕ್ಷ್ಯಗಳು ಹಾಗೂ ಇನ್ನಿತರ ಸಿಬ್ಬಂದಿ ಆತಂಕಕ್ಕೆ ಒಳಗಾದರು. ನ್ಯಾಯಾಲಯದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯ್ತು. ನ್ಯಾಯಾಧೀಶರು ಕಲಾಪಕ್ಕೆ ಆಗಮಿಸುವ ಮುನ್ನವೇ ಈ ಕೃತ್ಯ ಸಂಭವಿಸಿದೆ.

ತನ್ನ ಗಂಡನಿಂದಲೇ ಆಸಿಡ್ ದಾಳಿಗೆ ಒಳಗಾದ ಮಹಿಳೆ ಎದುರು ಚಿತ್ರಾ. ಆಕೆ ಮೇಲೆ ಆಸಿಡ್ ದಾಳಿ ನಡೆಸಿದ ಗಂಡನ ಹೆಸರು ಶಿವಕುಮಾರ್. ವಿಚಾರಣೆಗೆ ದಿನಾಂಕ ನಿಗದಿ ಆಗಿದ್ದ ಕಾರಣ, ಕೋರ್ಟ್ ಕಲಾಪ ಆರಂಭ ಆಗುವ ಮುನ್ನವೇ ಚಿತ್ರಾ ಅವರು ನ್ಯಾಯಾಲಯದ ಆವರಣಕ್ಕೆ ಬಂದಿದ್ದರು. ಕೋರ್ಟ್‌ನಲ್ಲಿ ನ್ಯಾಯಾಧೀಶರ ಬರುವಿಕೆಗೆ ಹಾಗೂ ತಮ್ಮ ಪ್ರಕರಣದ ವಿಚಾರಣೆಗೆ ಕಾಯುತ್ತಿದ್ದರು.

ಈ ಸಂದರ್ಭದಲ್ಲಿ ವಕೀಲರು ಹಾಗೂ ಪೊಲೀಸರ ಎದುರಿನಲ್ಲಿ ಏಕಾಏಕಿ ಆಸಿಡ್ ತುಂಬಿದ್ದ ಬಾಟಲ್ ತೆಗೆದ ಚಿತ್ರಾ ಅವರ ಪತಿ ಶಿವಕುಮಾರ್, ಆಕೆಯ ಮೇಲೆ ಎರಚಿದ. ನೀರಿನ ಬಾಟಲ್‌ನಲ್ಲಿ ಆಸಿಡ್ ತುಂಬಿಕೊಂಡು ಬಂದಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ. ಕೂಡಲೇ ಪೊಲೀಸರು ಆತನನ್ನು ತಡೆಯಲು ಯತ್ನಿಸಿದರು. ಆದ್ರೆ, ತನ್ನ ಕೈನಲ್ಲಿ ಇದ್ದ ಆಸಿಡ್ ಚಲ್ಲಾಡಿದ ಆರೋಪಿ ಶಿವಕುಮಾರ್, ನಂತರವಷ್ಟೇ ತಣ್ಣಗಾದ.

ಆರೋಪಿ ಶಿವಕುಮಾರ್‌ನನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸರು ಆತನನ್ನ ಠಾಣೆಗೆ ಕರೆದೊಯ್ದರು. ಇನ್ನು ತನ್ನ ಪತಿಯಿಂದಲೇ ಆಸಿಡ್ ದಾಳಿಗೆ ತುತ್ತಾದ ಚಿತ್ರಾ ಅವರಿಗೆ ಸುಟ್ಟ ಗಾಯಗಳು ಆಗಿವೆ. ಕೋರ್ಟ್ ಆವರಣದಲ್ಲಿ ಇದ್ದ ಕೆಲವು ಸಿಬ್ಬಂದಿ, ಸಾಕ್ಷ್ಯಗಳು ಹಾಗೂ ಇತರರ ಮೇಲೂ ಆಸಿಡ್ ಬಿದ್ದಿದೆ.

ನ್ಯಾಯಾಲಯದ ಮೇಜು, ಖುರ್ಚಿ ಹಾಗೂ ದಾಖಲೆ ಪತ್ರಗಳಿಗೂ ಆಸಿಡ್‌ ತಗುಲಿದೆ. ಬಟ್ಟೆ ಹಾಗೂ ಕಾಗದ ಸುಟ್ಟು ಹೋಗಿದೆ. ಕೋರ್ಟ್‌ ಆವರಣದ ತುಂಬೆಲ್ಲಾ ಆಸಿಡ್ ಚಲ್ಲಾಡಿದ್ದು, ಕೆಲಕಾಲ ಕೋರ್ಟ್‌ ಕಲಾಪ ಸ್ಥಗಿತಗೊಂಡಿತ್ತು.

ಈ ಕುರಿತು ಮಾಹಿತಿ ನೀಡಿರುವ ಕೊಯಮತ್ತೂರು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಶ್, ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ತನ್ನ ಪತ್ನಿ ತನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದ ಕಾರಣ ಆರೋಪಿ ಕೋಪಗೊಂಡಿದ್ದ. ಈ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಆಸಿಡ್ ದಾಳಿ ನಡೆಸಲು ಷಡ್ಯಂತ್ರ ರೂಪಿಸಿದ್ದ. ನೀರಿನ ಬಾಟಲ್‌ನಲ್ಲಿ ನೀರಿನಂತೆಯೇ ಕಾಣುವ ಆಸಿಡ್ ಸಂಗ್ರಹ ಮಾಡಿ ಕೋರ್ಟ್‌ ಆವರಣಕ್ಕೆ ತಂದಿದ್ದ ಎಂದು ಮಾಹಿತಿ ನೀಡಿದ್ದಾರೆ.




Post a Comment

Previous Post Next Post