ರ‍್ಯಾಪಿಡೋ ಬೈಕ್ ಚಾಲಕನಿಗೆ ಕಿರುಕುಳ ನೀಡಿದ ಆಟೋ ಚಾಲಕ: ವಿಡಿಯೋ ವೈರಲ್, ತನಿಖೆಗೆ ಪೊಲೀಸರು ಮುಂದು!

 ರ‍್ಯಾಪಿಡೋ ಬೈಕ್ ಚಾಲಕನೊಬ್ಬನಿಗೆ ಆಟೋ ಚಾಲಕನೊಬ್ಬ ಕಿರುಕುಳ ನೀಡಿದ ಘಟನೆ ಇಂದಿರಾನಗರದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

                                ಬೈಕ್ ಚಾಲಕನಿಗೆ ಕಿರುಕುಳ ನೀಡುತ್ತಿರುವ ಆಟೋ ಚಾಲಕ.
By :Rekha.M
Online Desk

ಬೆಂಗಳೂರು: ರ‍್ಯಾಪಿಡೋ ಬೈಕ್ ಚಾಲಕನೊಬ್ಬನಿಗೆ ಆಟೋ ಚಾಲಕನೊಬ್ಬ ಕಿರುಕುಳ ನೀಡಿದ ಘಟನೆ ಇಂದಿರಾನಗರದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಟೋ ಚಾಲಕನೊಬ್ಬ ರ‍್ಯಾಪಿಡೋ ಬೈಕ್ ಚಾಲಕನನ್ನು ನಿಲ್ಲಿಸಿದ್ದು, ಬೈದಿದ್ದಾನೆ. ಅಲ್ಲದೇ, ಕೋಪದಲ್ಲಿ ಫೋನ್ ಕಸಿದುಕೊಂಡು ನೆಲಕ್ಕೆ ಎಸೆದಿದ್ದಾನೆ. ಈ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ ಎನ್ನಲಾಗಿದ್ದು, ವಿಡಿಯೋ ವೈರಲ್ ಆಗಿದೆ.

ಸ್ನೇಹಿತರೇ, ಅಕ್ರಮ ರಾಪಿಡೋ ದಂಧೆ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಿ. ಈತ ಪರದೇಶದಿಂದ ಬಂದು ರಾಜನಂತೆ ಓಡಿಸುತ್ತಿದ್ದಾನೆ. ಆಟೋ ಇಲಾಖೆ ಎಷ್ಟು ಹಾಳಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇಲಾಖೆಯು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ, ಬೇರೆ ದೇಶದಿಂದ ಬಂದವನು, ವೈಟ್ ಬೋರ್ಡ್ ಹೊಂದಿದ್ದರೂ ಹುಡುಗಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ’ ಎಂದು ಆಟೋ ಚಾಲಕ ಹೇಳಿದ್ದು, ಇದೇ ವೇಳೆ ಬೈಕ್ ಚಾಲಕನಿಗೆ ಕೈ ಮಾಡಲು ಮುಂದಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಆಟೋ ಚಾಲಕನ ಈ ಕೃತ್ಯಕ್ಕೆ ಎಲ್ಲೆಡೆ ಖಂಡನೆಗಳು ವ್ಯಕ್ತವಾಗುತ್ತಿದೆ. ಘಟನೆ ಇದೀಗ ಬೆಂಗಳೂರು ಪೊಲೀಸರ ಗಮನಕ್ಕೂ ಬಂದಿದ್ದು, ಆಟೋ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಇಂದಿರಾನಗರ ಪೊಲೀಸರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಬೈಕ್ ಸವಾರರು ಇನ್ನೂ ಯಾವುದೇ ದೂರು ದಾಖಲಿಸಿಲ್ಲ. ಆದರೆ, ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಆಧರಿಸಿ ಘಟನೆಯ ಕುರಿತು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಕಟ್ಟುನಿಟ್ಟಿನ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್‌ ಮಾಡಿದ್ದಾರೆ.


Post a Comment

Previous Post Next Post